ಮಂಗಳೂರು: ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಇದರೊಂದಿಗೆ ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026, 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್, ಮೀನುಗಾರಿಕೆ ಮತ್ತು ನೀಲಿ ಆರ್ಥಿಕತೆ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮೋದಿತ ಮೊತ್ತದಲ್ಲಿ ಸುಮಾರು ₹16,000 ಕೋಟಿ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಹಾಗೂ ಉಳಿದ ಮೊತ್ತ ಮಂಗಳೂರು, ಉಡುಪಿ ಮತ್ತು ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಮೀಸಲಾಗಲಿದೆ ಎಂದು ತಿಳಿಸಿದರು.
ತುಳುವಿಗೆ ಆಡಳಿತ ಭಾಷೆಯ ಸ್ಥಾನಮಾನ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ಬೇಡಿಕೆಯನ್ನು ಪರಿಗಣಿಸಿ ತುಳುವಿಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ನೀಡಲು ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಅವರು ಈ ಬೇಡಿಕೆಯನ್ನು ಹಿಂದಿನಿಂದಲೂ ಮುಂದಿಟ್ಟಿದ್ದರು. ಸಚಿವ ಯು.ಟಿ. ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ಕುರಿತು ಒತ್ತಡ ಹೇರಿದ್ದರು ಎಂದು ಶಿವಕುಮಾರ್ ಸ್ಮರಿಸಿದರು. ತುಳು ಭಾಷೆಯ ಮಾನ್ಯತೆಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
‘ಜನರ ಭಾವನೆ ಮಾತ್ರವಲ್ಲ, ಅವರ ಬದುಕಿನ ಮೇಲೂ ಗಮನಹರಿಸಿ ಸರ್ಕಾರ ಕೆಲಸ ಮಾಡಲಿದೆ. ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ತುಂಬುವ ಮೂಲಕ ಜನರ ಬದುಕು ಕಟ್ಟಿಕೊಡುವುದು ಸರ್ಕಾರದ ಉದ್ದೇಶ’ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡಕ್ಕೆ ‘ಮಂಗಳೂರು’ ಹೆಸರು?
ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು’ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬೇಡಿಕೆಯ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಮಂಗಳೂರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿದ್ದು, ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಕಾಲ ಸಾರ್ವಜನಿಕರಿಂದ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕರಾವಳಿ–ಮಲೆನಾಡಿಗೆ ಹೊಸ ಪ್ರವಾಸೋದ್ಯಮ ನೀತಿ
ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026ಕ್ಕೂ ಸಂಪುಟ ಅನುಮೋದನೆ ನೀಡಿದೆ. ಈ ಹಿಂದಿನ ಪ್ರವಾಸೋದ್ಯಮ ನೀತಿಗಳಿಗಿಂತ ವಿಭಿನ್ನವಾಗಿ ರೂಪಿಸಲಾಗಿರುವ ಹೊಸ ನೀತಿಯಡಿ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸುವ ಉದ್ದೇಶವಿದೆ.
ಹೂಡಿಕೆದಾರರಿಗೆ ಹೆಚ್ಚಿನ ಪ್ರೋತ್ಸಾಹ, ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪ್ರವಾಸೋದ್ಯಮ ಹೂಡಿಕೆಗೆ ಉತ್ತೇಜನ ನೀಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಮೀನುಗಾರಿಕೆ, ನೀಲಿ ಆರ್ಥಿಕತೆ ವಿಶ್ವವಿದ್ಯಾಲಯ
ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಮೀನುಗಾರಿಕೆ ಮತ್ತು ನೀಲಿ ಆರ್ಥಿಕತೆ ವಿಶ್ವವಿದ್ಯಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವನ್ನು 60ರಿಂದ 200ಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಇದರ ಜತೆಗೆ 150 ಎಕರೆ ಪ್ರದೇಶದಲ್ಲಿ ಮೀನುಗಾರಿಕೆ ಪಾರ್ಕ್ ನಿರ್ಮಾಣಕ್ಕೂ ಸಂಪುಟ ಅನುಮೋದನೆ ನೀಡಿದೆ.
ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು
ಕರಾವಳಿ ಭಾಗದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವಿಸ್ತರಣೆಗೆ ಒತ್ತು ನೀಡಲಾಗಿದ್ದು, ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ₹549 ಕೋಟಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇದೇ ವೇಳೆ ಕಿದ್ವಾಯಿ ಹಾಗೂ ಜಯದೇವ ಆಸ್ಪತ್ರೆಗಳ ಸ್ಥಾಪನೆಗೆ ಈ ಭಾಗದಿಂದ ಬೇಡಿಕೆ ಬಂದಿರುವುದಾಗಿಯೂ ಅವರು ಹೇಳಿದರು.
15 ತಿಂಗಳಲ್ಲಿ 10–12 ಕಡೆ ಸಂಪುಟ ಸಭೆ
ಬೆಂಗಳೂರಿನ ಹೊರಗೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಮುಂದಿನ 15 ತಿಂಗಳಲ್ಲಿ ರಾಜ್ಯದ 10ರಿಂದ 12 ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ ಎಂದು ಶಿವಕುಮಾರ್ ಹೇಳಿದರು.
ಯಾವ ಪ್ರದೇಶದಲ್ಲಿ ಅಗತ್ಯ ಮತ್ತು ಸೂಕ್ತ ಸಾಮರ್ಥ್ಯವಿದೆಯೋ ಅಲ್ಲಿಗೆ ತೆರಳಿ ಸಂಪುಟ ಸಭೆ ನಡೆಸಲಾಗುವುದು. ‘ಸಮಗ್ರ ಕರ್ನಾಟಕ, ಸಮೃದ್ಧ ಕರ್ನಾಟಕ’ ನಿರ್ಮಿಸುವುದು ಸರ್ಕಾರದ ಗುರಿ ಎಂದು ಅವರು ತಿಳಿಸಿದರು.
ಕಸ್ತೂರಿರಂಗನ್ ವರದಿ: ಜನಾಭಿಪ್ರಾಯಕ್ಕೆ ಒತ್ತು
ಕಸ್ತೂರಿರಂಗನ್ ವರದಿ ಕುರಿತು ಹೆಬ್ರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ, ಬಳಿಕ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನರ ಅಭಿಪ್ರಾಯ ಪಡೆಯಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶದ ಗಮನ ಸೆಳೆದಿದ್ದು, ಹಲವು ರಾಷ್ಟ್ರೀಕೃತ ಬ್ಯಾಂಕುಗಳ ಉಗಮಕ್ಕೂ ಕಾರಣವಾಗಿದೆ. ಬಂದರು, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿಯೂ ಜಿಲ್ಲೆ ಪ್ರಮುಖ ಸ್ಥಾನ ಹೊಂದಿದೆ ಎಂದು ಶಿವಕುಮಾರ್ ವಿವರಿಸಿದರು.
ಮಂಗಳೂರಿನಲ್ಲಿ ನಡೆದ ಈ ಮೊದಲ ಸಂಪುಟ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿ ಕುರಿತು ಸಲಹೆಗಳನ್ನು ನೀಡಿದ್ದು, ಪಕ್ಷಭೇದ ಮರೆತು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
What do you feel about this post?
Like
Love
Happy
Haha
Sad

