ಮಂಗಳೂರು: ಗಂಭೀರ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಣ್ಣೂರಿನ 59 ವರ್ಷದ ವ್ಯಕ್ತಿಗೆ ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶಸ್ತ್ರಚಿಕಿತ್ಸೆಯ ಏಳು ದಿನಗಳಲ್ಲೇ ರೋಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಇಂಡಿಯಾನಾ ಆಸ್ಪತ್ರೆಯ ಮುಖ್ಯಸ್ಥ ಡಾ. ಯೂಸುಫ್ ಕುಂಬ್ಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗಿಯು ಮಹಾಪಧಮನಿಯಲ್ಲಿ ಹರಿತ ಹೃದಯದ ತೀವ್ರ ಹಿಗ್ಗುವಿಕೆ, ರಕ್ತ ಪಂಪ್ ಮಾಡುವ ಸಾಮರ್ಥ್ಯದಲ್ಲಿ ಕುಸಿತ ಹಾಗೂ ಹೃದಯದ ರಕ್ತನಾಳಗಳಲ್ಲಿ ಗಂಭೀರ ಅಡಚಣೆಗಳಿಂದ ಬಳಲುತ್ತಿದ್ದರು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಚೇತರಿಕೆಯ ನಿರೀಕ್ಷೆ ಕ್ಷೀಣಿಸಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು ಎಂದರು.
ಆಸ್ಪತ್ರೆಗೆ ದಾಖಲಾದಾಗ ರೋಗಿಯ ಹೃದಯದ ಎಡ ಕುಹರದ ರಕ್ತ ಪಂಪ್ ಮಾಡುವ ಸಾಮರ್ಥ್ಯ ಶೇ 25ಕ್ಕೆ ಕುಸಿದಿತ್ತು. ಶ್ವಾಸಕೋಶಗಳಲ್ಲಿಯೂ ದ್ರವ ಸಂಗ್ರಹ ಆಗಿತ್ತು. ಎರಡು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ಸ್ಥಿರಗೊಳಿಸಿದ ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಹೃದಯ, ಎದೆ ಮತ್ತು ರಕ್ತನಾಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರತೀಕ್ ವಾಸ್ವಾನಿ ಅವರ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಹಾನಿಗೊಳಗಾಗಿದ್ದ ಸಂಪೂರ್ಣ ಮಹಾಪಧಮನಿಯನ್ನು ಬದಲಾಯಿಸಲಾಯಿತು. ಹೃದಯದ ಎರಡು ರಕ್ತನಾಳಗಳಿಗೆ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿ, ಮೆದುಳಿಗೆ ರಕ್ತ ಪೂರೈಸುವ ಮಹಾಪಧಮನಿಯ ಕಮಾನು ಭಾಗವನ್ನೂ ಸರಿಪಡಿಸಲಾಯಿತು. ಕರಾವಳಿ ಕರ್ನಾಟಕದಲ್ಲೇ ಈ ಮಾದರಿಯ ಮೊದಲ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ಆಸ್ಪತ್ರೆ ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಬಳಿಕ ಮೂರು ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಯನ್ನು ವಾರ್ಡ್ಗೆ ಸ್ಥಳಾಂತರಿಸಲಾಯಿತು. ಬಳಿಕ ಸ್ವತಃ ನಡೆಯುವಷ್ಟು ಚೇತರಿಸಿಕೊಂಡ ಅವರು ಏಳನೇ ದಿನವೇ ಆಸ್ಪತ್ರೆಯಿಂದ ಬಿಡುಗಡೆಯಾದರು. ಹಿರಿಯ ಹೃದಯ ಅರಿವಳಿಕೆ ತಜ್ಞ ಡಾ. ಗುರುರಾಜ್ ತಂತ್ರಿ ಸೇರಿದಂತೆ ವೈದ್ಯರು, ತೀವ್ರ ನಿಗಾ ತಜ್ಞರು, ನರ್ಸ್ಗಳು ಹಾಗೂ ಸಹಾಯಕ ಸಿಬ್ಬಂದಿ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ಸಂಕೀರ್ಣ ಹಾಗೂ ಹೆಚ್ಚಿನ ಅಪಾಯದ ಹೃದಯ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ಸಮನ್ವಯ ಮಹತ್ವದ್ದಾಗಿದೆ ಎಂದರು.


