ಎಂಐಒನಿಂದ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್ ಲೋಕಾರ್ಪಣೆ, ಕ್ಯಾನ್ಸರ್ ಅಪಾಯದ ಅರಿವಿಗೆ ಡಿಜಿಟಲ್ ಸ್ಪರ್ಶದ ಹೆಜ್ಜೆ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕ್ಯಾನ್ಸರ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ರೋಗದ ಅಪಾಯದ ಅಂಶಗಳನ್ನು ಆರಂಭದಲ್ಲೇ ಗುರುತಿಸಿ, ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ನೂತನ ಡಿಜಿಟಲ್ ಆ್ಯಪ್ ಸಿದ್ಧಪಡಿಸಿದ್ದು, ‘ಎಂಐಒ ಕ್ಯಾನ್ಸರ್ ಸ್ಕ್ರೀನರ್ ಆ್ಯಪ್’ನ ಅಧಿಕೃತ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು.

ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಮೈಕೆಲ್ ಡಿಸೋಜ ಅವರು ಆ್ಯಪ್ ಅನ್ನು ಅನಾವರಣ ಮಾಡಿ ಮಾತನಾಡಿ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ಪ್ರಮುಖ ರೂವಾರಿ ಡಾ. ಸುರೇಶ್ ರಾವ್ ಅವರು ಕ್ಯಾನ್ಸರ್ ರೋಗಿಗಳಿಗೆ ಸಹಕಾರಿ ಆಗುವಂತಹ ಆ್ಯಪ್ ಅನ್ನು ಬಹಳ ಪ್ರಯೋಜನಕಾರಿ ರೀತಿಯಲ್ಲಿ ಅಭಿವೃದ್ಧಿ ಪಡಿಸಿದ್ದು, ಉಚಿತವಾಗಿ ಜನರ ಮಡಿಲಿಗೆ ಹಾಕಿದ್ದಾರೆ. ಇದೊಂದು ಪ್ರಯೋಜನಕಾರಿ ಆ್ಯಪ್ ಆಗಿದ್ದು, ಎಲ್ಲರೂ ಇದ್ದನ್ನು ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಮಾತನಾಡಿ, ಹವಮಾನದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ನಾವು ಸೇವಿಸುವ ಗಾಳಿ ವಿಷಕಾರಿ ಆಗಿದೆ. ಪರಿಸರದ ಕೆಟ್ಟು ಹೋಗಿದೆ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಕ್ಯಾನ್ಸರ್ ಬರುವ ದಿನಗಳಲ್ಲಿ ಜ್ವರ, ಶೀತ, ಕೆಮ್ಮ ನೆಗಡೆಯಂತೆ ಎಲ್ಲರಿಗೂ ಬರುವ ಸಾಧ್ಯತೆ ಮುಂದಿನ ದಿನಗಳಲ್ಲಿ ಕಾಣಬಹುದು. ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ರಾವ್ ಅವರು ಜನರಿಗೆ ಅನುಕೂಲಕರ ಆ್ಯಪ್ ಅನ್ನು ಲೋಕಾರ್ಪಣೆ ಮಾಡುವ ಮೂಲಕ ಪರೋಪಕಾರಕ್ಕೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ರಾವ್ ಅವರು ಹೃದಯವಂತ ವೈದ್ಯ, ಅವರು ಎಲ್ಲರಿಗೂ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಹೊಸ ಹೊಸ ಆಯಾಮಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಇದರ ಭಾಗವೇ ಈ ಆ್ಯಪ್, ಕ್ಯಾನ್ಸರ್ ಪತ್ತೆಗೆ ಇದೊಂದು ರಾಮಬಾಣ ಇದ್ದಂತೆ, ಎಲ್ಲರೂ ಇದನ್ನು ಬಳಕೆ ಮಾಡುವಂತೆ ಹೇಳಿದರು.


ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ ಅವರು ಮಾತನಾಡಿ, ಆರೋಗ್ಯ ಸೇವೆ ಇಂದಿನ ಅತೀ ಪ್ರಮುಖ ಆದ್ಯತೆಗಳಲ್ಲಿ ಒಂದು, ಕೇಂದ್ರ ಸರಕಾರ ಕ್ಯಾನ್ಸರ್ ರೋಗದ ಔಷಧಗಳ ಬೆಲೆ ಇಳಿಕೆ ಮಾಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಆರೋಗ್ಯ ಕ್ಷೇತ್ರ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ನಾವು ಸೇವಿಸುವ ಆಹಾರ ಸಾಕಷ್ಟು ಕಲಬೆರಕೆ ಆಗಿದ್ದು, ಅದನ್ನು ಪತ್ತೆ ಮಾಡುವ ಕೆಲಸ ಆಗಬೇಕು. ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ರಾವ್ ಅವರು ಒಂದು ವಿಶಿಷ್ಟ ಆ್ಯಪ್ ಅನ್ನು ಬಿಡುಗಡೆ ಮಾಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆ ಕ್ಯಾನ್ಸರ್ ರೋಗಿಗಳ ಗುಣಮುಖ ಆಗುವುದಕ್ಕೆ ತಮ್ಮದೇ ವಿಶಿಷ್ಟ ಚಿಕಿತ್ಸೆ ವಿಧಾನಗಳ ಮೂಲಕ ಹೆಜ್ಜೆ ಇಟ್ಟಿದೆ ಎಂದರು.

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ರಾವ್ ಅವರು ಮಾತನಾಡಿ, ವೈಯಕ್ತಿಕ ಬಳಕೆದಾರರ ಜತೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಹಾಗೂ ಪ್ರಾಥಮಿಕ ಆರೋಗ್ಯ ಸೇವಾ ಸಿಬ್ಬಂದಿಗೂ ಈ ಆ್ಯಪ್ ನೆರವಾಗಲಿದೆ. ಅಪಾಯದ ಅಂಶಗಳನ್ನು ವ್ಯವಸ್ಥಿತವಾಗಿ ಗುರುತಿಸಿ, ಅಗತ್ಯವಿರುವ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಸೇವೆ ಪಡೆಯಲು ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವುದೂ ಇದರ ಉದ್ದೇಶ ಎಂದರು.

ವೈದ್ಯಕೀಯ ಪರಿಣತಿ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಸಂಯೋಜಿಸಿ ಕ್ಯಾನ್ಸರ್ ಅಪಾಯದ ಅರಿವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವುದು ಈ ಪ್ರಯತ್ನದ ಆಶಯವಾಗಿದೆ. ಗೂಗಲ್ ಪ್ಲೇ ಸ್ಟೋರ್ (https://play.google.com/store/apps/details?id=com.cancer.cancerscreen\&pcampaignid=web_share\&utm_source=chatgpt.com)ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು,

ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅವರು ಮಾತನಾಡಿದರು. ಆಸ್ಪತ್ರೆಯ ವೈದ್ಯ ಡಾ. ಕಿಣಿ ಸೇರಿದಂತೆ ಹಲವರು ಇದ್ದರು.

ಅಪಾಯದ ಅಂಶಗಳ ಮೌಲ್ಯಮಾಪನ: ಡಾ. ಸುರೇಶ್ ರಾವ್

ಈ ಆ್ಯಪ್ ವ್ಯಕ್ತಿಯ ವಯಸ್ಸು, ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ, ತಂಬಾಕು ಸೇವನೆ, ಮದ್ಯಪಾನ, ಬೊಜ್ಜು, ಜೀವನಶೈಲಿ ಹಾಗೂ ಕ್ಯಾನ್ಸರ್‌ಗೆ ಸಂಬಂಧಿಸಿದ ಲಕ್ಷಣಗಳನ್ನು ಆಧರಿಸಿ ಅಪಾಯದ ಮಟ್ಟದ ಮೌಲ್ಯಮಾಪನ ಮಾಡುತ್ತದೆ. ಬಳಕೆದಾರರು ನೀಡುವ ಮಾಹಿತಿಯ ಆಧಾರದಲ್ಲಿ ಸಾಮಾನ್ಯ, ಮಧ್ಯಂತರ, ಮಧ್ಯಮ ಹಾಗೂ ಹೆಚ್ಚಿನ ಅಪಾಯ ಎಂಬ ನಾಲ್ಕು ವರ್ಗಗಳಾಗಿ ವಿಂಗಡಿಸುತ್ತದೆ. ಗುರುತಿಸಲಾದ ಅಪಾಯದ ಮಟ್ಟಕ್ಕೆ ಅನುಗುಣವಾಗಿ ಆರೋಗ್ಯ ಜಾಗೃತಿ, ಲಕ್ಷಣಗಳ ಮೇಲ್ವಿಚಾರಣೆ, ವೈದ್ಯಕೀಯ ಸಮಾಲೋಚನೆ, ಅಗತ್ಯ ತಪಾಸಣೆ ಹಾಗೂ ತಜ್ಞ ವೈದ್ಯರ ಸಲಹೆ ಪಡೆಯುವ ಕುರಿತು ಮಾರ್ಗದರ್ಶನ ನೀಡುತ್ತದೆ. ಭಾರತೀಯರಲ್ಲಿ ಕಂಡು ಬರುವ ಪ್ರಮುಖ ಕ್ಯಾನ್ಸರ್‌ಗಳಾದ ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗರ್ಭಾಶಯದ ಒಳಪದರದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಜಠರದ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳನ್ನು ಈ ಆ್ಯಪ್ ಒಳಗೊಂಡಿದೆ ಎಂದು ಎಂಐಒ ನಿರ್ದೇಶಕ ಡಾ. ಸುರೇಶ್ ರಾವ್ ಹೇಳಿದರು.

Leave a Reply

Your email address will not be published. Required fields are marked *