ಮೂಡುಬಿದಿರೆ: ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಹಾಗೂ ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ತಂಡಗಳು ಮತ್ತೆ ಪ್ರಾಬಲ್ಯ ಮೆರೆದಿವೆ. ಬಾಲಕರ ವಿಭಾಗದಲ್ಲಿ 19ನೇ ಬಾರಿ ಹಾಗೂ ಬಾಲಕಿಯರ ವಿಭಾಗದಲ್ಲಿ 17ನೇ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಪಂದ್ಯಾವಳಿ ನಡೆಯಿತು.
ಬಾಲಕರ ವಿಭಾಗದಲ್ಲಿ ಆಳ್ವಾಸ್‌ಗೆ ಜಯ
ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಆಳ್ವಾಸ್ ತಂಡವು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ತಂಡವನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ವಿಜಯ್ ಕುಮಾರ್ ಉತ್ತಮ ಓಟಗಾರ ಪ್ರಶಸ್ತಿಗೆ ಭಾಜನರಾದರೆ, ಚೇತನ್ ಕೆ.ಪಿ. ಉತ್ತಮ ಸವ್ಯಸಾಚಿ ಪ್ರಶಸ್ತಿ ಪಡೆದರು.
ಬಾಲಕಿಯರ ವಿಭಾಗದಲ್ಲೂ ಮೇಲುಗೈ
ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಆಳ್ವಾಸ್ ತಂಡವು ಕಟೀಲಿನ ಎಸ್‌ಡಿಪಿಟಿ ಪದವಿಪೂರ್ವ ಕಾಲೇಜಿನ ತಂಡವನ್ನು ಮಣಿಸಿ 17ನೇ ಬಾರಿಗೆ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿತು. ಆಳ್ವಾಸ್‌ನ ವಿಜಯಲಕ್ಷ್ಮಿ ಉತ್ತಮ ಓಟಗಾರ್ತಿ ಪ್ರಶಸ್ತಿ ಪಡೆದರೆ, ಲಾವಣ್ಯ ಉತ್ತಮ ಸವ್ಯಸಾಚಿ ಪ್ರಶಸ್ತಿಗೆ ಪಾತ್ರರಾದರು.
ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಸಂಸ್ಥೆಯ ಕ್ರೀಡಾ ಸಾಧನೆಯನ್ನು ಮುಂದುವರಿಸಿದ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.



