ಮಂಗಳೂರಿನ ಕೇಂದ್ರ ಮೈದಾನದಲ್ಲಿ ಚಪ್ಪರ ಮುಹೂರ್ತ, ಅ. 18ಕ್ಕೆ 5 ನೇ ವರ್ಷದ ಕುಡ್ಲದ ಪಿಲಿಪರ್ಬ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ

Spread the love

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕಲೆಗೆ ಮತ್ತಷ್ಟು ಮೆರುಗು ನೀಡುವ ಹಾಗೂ ಅದರ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಐದನೇ ವರ್ಷದ ‘ಕುಡ್ಲದ ಪಿಲಿಪರ್ಬ-2026’ಕ್ಕೆ ಸಿದ್ಧತೆ ಆರಂಭವಾಗಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಉತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.

ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ದಸರಾ ಸಂದರ್ಭದಲ್ಲಿ ಇಡೀ ತುಳುನಾಡಿನಲ್ಲಿ ಹುಲಿವೇಷದ ಸಂಭ್ರಮ ಮನೆಮಾಡುತ್ತದೆ. ಈ ನೆಲದ ಸಾಂಪ್ರದಾಯಿಕ ಕಲೆಯಾಗಿರುವ ಹುಲಿವೇಷವು ಇಂದು ತುಳುನಾಡಿನ ಗಡಿ ದಾಟಿ ದೇಶ-ವಿದೇಶಗಳಲ್ಲಿಯೂ ಜನಪ್ರಿಯತೆ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಹುಲಿವೇಷದ ಜನಪ್ರಿಯತೆ ಮತ್ತಷ್ಟು ಹೆಚ್ಚಿಸುವುದರ ಜತೆಗೆ ತುಳುನಾಡಿನ ಗತವೈಭವದ ಘನ ಪರಂಪರೆಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಪಿಲಿಪರ್ಬವನ್ನು ಆಯೋಜಿಸುತ್ತಿದೆ. ಅಕ್ಟೋಬರ್ 18ರಂದು ನಡೆಯಲಿರುವ ಐದನೇ ವರ್ಷದ ಪಿಲಿಪರ್ಬವು ತುಳುನಾಡಿನ ಸಾಂಸ್ಕೃತಿಕ ವೈಭವವನ್ನು ಮೆಲುಕು ಹಾಕುವ ಹಾಗೂ ಈ ಕಲೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನವಾಗಿದೆ ಎಂದರು.

ಪಿಲಿಪರ್ಬದಲ್ಲಿ ಭಾಗವಹಿಸಲಿರುವ ಎಲ್ಲ ಹುಲಿವೇಷ ತಂಡಗಳಿಗೂ ಶುಭ ಹಾರೈಸಿದ ಅವರು, ತಂಡಗಳನ್ನು ಪ್ರೋತ್ಸಾಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಮಲಾಕ್ಷ ಬಜಿಲಕೇರಿ, ಕಿರಣ್ ಶೆಣೈ, ನರೇಶ್ ಪ್ರಭು, ಜಗದೀಶ್ ಕದ್ರಿ, ಲಲಿತ್ ಮೆಂಡನ್ ಸೇರಿದಂತೆ ಪ್ರತಿಷ್ಠಾನದ ಹಲವು ಪ್ರಮುಖರು ಇದ್ದರು.

Leave a Reply

Your email address will not be published. Required fields are marked *