ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ಇದೇ ಮೇ 28 ರಿಂದ 31 ರವರೆಗೆ ನಗರದ ಕದ್ರಿ ಉದ್ಯಾನದಲ್ಲಿ ಮಾವು ಮೇಳ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಮೇಳದಲ್ಲಿ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕವಾಗಿ ಮಾಗಿಸಲಾದ ಮಾವು ಬೆಳೆಯ ವಿವಿಧ ತಳಿಗಳಾದ ಆಲ್ಫಾನ್ಸೋ, ಬಾದಾಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನ್ಪಲ್ಲಿ, ಶುಗರ್ ಬೇಬಿ ಇತ್ಯಾದಿ ಮಾವಿನ ಹಣ್ಣುಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯ ಇವೆ ಎಂದರು.
ರೈತ ವಾಸು ಅವರು ಮಾತನಾಡಿ, ರಾಮನಗರದಿಂದ ಸುಮಾರು 25 ಮಾವು ಬೆಳೆಗಾರರು ಮೇಳಕ್ಕೆ ಬರುವ ನಿರೀಕ್ಷೆ ಇದೆ. ಬೆಳಗ್ಗೆ 8 ರಿಂದ ರಾತ್ರಿ 8. 30ರವರೆಗೆ ಮಾರಾಟ ಇರಲಿದೆ. ಈ ವರ್ಷ 25 ಟನ್ ಮಾರಾಟ ಮಾಡುವ ನಿರೀಕ್ಷೆ ಇದೆ ಎಂದರು.
ಮೇ 28 ರಂದು ಬೆಳಿಗ್ಗೆ 11 ಗಂಟೆಗೆ ಸ್ಪೀಕರ್ ಯು. ಟಿ. ಖಾದರ್ ಅವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ತೋಟಗಾರಿಕಾ ಇಲಾಖೆಯ ನಿರ್ದೇಶಕ ಇಬ್ರಾಹೀಂ ಮೈಗೂರ, ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕರ್ಬಾರಿ, ಪಾಲಿಕೆ ಕಮಿಷನರ್ ರವಿ ಚಂದ್ರ ನಾಯ್ಕ್, ತೋಟಗಾರಿಕಾ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ. ಎಸ್. ನಂದಾ, ದ. ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ್ ಕುಮಾರ್ ರೈ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತೋಟಗಾರಿಕೆಯ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಅವರು ಮಾತನಾಡಿ, ಅನುದಾನದ ಕೊರತೆಯಿಂದಾಗಿ ಈ ವರ್ಷ ತೋಟಗಾರಿಕಾ ಇಲಾಖೆ ವತಿಯಿಂದ ಮಾವು ಮೇಳ ಆಯೋಜನೆ ಮಾಡುತ್ತಿಲ್ಲ. ಬದಲಾಗಿ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯತ್ ಪ್ರಚಾರ ಸಾಹಿತ್ಯ ಯೋಜನೆ ಅಡಿ ಮಾವು ಮೇಳ ಆಯೋಜನೆಗೆ ಕಳೆದ ವರ್ಷ 75 ಸಾವಿರ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ವರ್ಷ ಈ ಯೋಜನೆ ರಾಜ್ಯ ವ್ಯಾಪಿ ರದ್ದು ಆಗಿದೆ ಎಂದರು.
ಸಂಘದ ನಿರ್ದೇಶಕ ಸಿದ್ದರಾಜು, ಪ್ರಗತಿಪರ ಕೃಷಿಕ ವಾಸು ಇದ್ದರು.
What do you feel about this post?
Like
Love
Happy
Haha
Sad
