ಬೆಳ್ತಂಗಡಿ: ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದ ವೃದ್ದೆಗೆ ಮತ್ತು ಬರುವ ಲಡ್ಡು ಮತ್ತು ಜ್ಯೂಸ್ ಕೊಟ್ಟು ವೃದ್ಧೆಯನ್ನು ಅಸ್ವಸ್ಥರನ್ನಾಗಿ ಮಾಡಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಅಪಹರಣ ಮಾಡಿ ಪರಾರಿ ಆಗಿರುವ ಘಟನೆ ನಡೆದಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಜೆ.ಪಿ.ನಗರ ನಿವಾಸಿ ಪ್ರೇಮಾ.ಕೆ (70) ಎಂಬುವವರು ಮೇ 23 ರಂದು ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಇರುವ ತನ್ನ ಚಿಕ್ಕಮ್ಮನ ಮಗಳ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಬಂದಿದ್ದರು. ಮೇ 25 ರಂದು ಮಧ್ಯಾಹ್ನ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿ ರಾತ್ರಿ ವಾಪಸ್ ಊರಿಗೆ ಹೋಗಲು ರಾತ್ರಿ ದೇವಸ್ಥಾನದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದರು.
ಅಲ್ಲಿಯೇ ಪಕ್ಕದಲ್ಲಿ ಕುಳಿತ್ತಿದ್ದ ಅಪರಿಚಿತ ವ್ಯಕ್ತಿ ಅವರಲ್ಲಿ ಬಂದು ಪರಿಚಯಿಸಿಕೊಂಡು ಮಾತನಾಡಿದ್ದಾನೆ. ನಾನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಬಂದು ಇಲ್ಲಿ ದರ್ಶನ ಮಾಡಿ ಊಟ ಮಾಡಿ ಬಂದಿದ್ದೇನೆ ಎಂದು ಹೇಳಿ ಲಡ್ಡು ಪ್ರಸಾದ ಕೊಟ್ಟು ಬಳಿಕ ಜ್ಯೂಸ್ ಬಾಟಲಿಯಿಂದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದಾಗ ಪ್ರೇಮ ಅವರು ಸ್ವಲ್ಪ ಜ್ಯೂಸ್ ಕುಡಿದು ವಾಪಸ್ ಕೊಟ್ಟಿದ್ದು, ನಂತರ ರಾತ್ರಿ 10:15 ಗಂಟೆ ಸುಮಾರಿಗೆ ಆತನು ಪ್ರೇಮ ಅವರನ್ನು ದೇವಸ್ಥಾನದ ಮಹಾದ್ವಾರದ ಬಳಿ ಇರುವ ಕಟ್ಟೆಯ ಬಳಿ ಕರೆದುಕೊಂಡು ಹೋಗಿ ಕೂರಿಸಿದ್ದಾನೆ. ಈ ವೇಳೆ ಉಪಾಯವಾಗಿ ವೃದ್ದೆ ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾನೆ.
ಬಸ್ನಲ್ಲಿ ಆಸನ ಇದೇಯಾ ಎಂದು ನೋಡಿ ಬರುತ್ತೇನೆ ಎಂದು ಹೇಳಿ ಚಿನ್ನಾಭರಣದೊಂದಿಗೆ ಹೋಗಿದ್ದಾನೆ. ಬಳಿಕ ಅಸ್ವಸ್ಥರಾಗಿದ್ದ ಪ್ರೇಮ ಅವರನ್ನು ಯಾರೋ ಉಜಿರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊರಳಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಹಾಗೂ ಪರ್ಸಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಮುತ್ತಿನ ಸರ, ಹಾಗೂ ಸುಮಾರು 20 ಗ್ರಾಂ ತೂಕದ ಚಿನ್ನದ ಕೈಬಳೆ ಮತ್ತು ನಗದು 7000 ರೂ. ಕಳವು ಮಾಡಿ ಪರಾರಿ ಆಗಿದ್ದಾನೆ ಕಳವು ಆದ ಸ್ವತ್ತುಗಳ ಒಟ್ಟು ಮೌಲ್ಯ ನಗದು ಸೇರಿ 10 ಲಕ್ಷ ರೂಪಾಯಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರೇಮ ಅವರು ನೀಡಿ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ. 26 ರಂದು ಪ್ರಕರಣ ದಾಖಲಾಗಿದೆ. ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಬೆಂಗಳೂರಿಗೆ ತೆರಳಿದ್ದಾರೆ.



