ಸೇವೆಯಲ್ಲಿ ಇರುವ ಶಿಕ್ಷಕರಿಗೂ ಟಿಇಟಿ ಕಡ್ಡಾಯ, ಮರುಪರಿಶೀಲನಾ ಅರ್ಜಿಗಳ ವಜಾ; 2028 ರ ಅಗಸ್ಟ್‌ 31 ರವರೆಗೆ ಸುಪ್ರೀಂ ಗಡುವು ವಿಸ್ತರಣೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ದೇಶ ವಿದೇಶ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ
<

Spread the love

ನವದೆಹಲಿ: ಸೇವೆಯಲ್ಲಿ ಇರುವ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಎಂಬ ತನ್ನ ಹಿಂದಿನ ತೀರ್ಪ ಅನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಎತ್ತಿ ಹಿಡಿದಿದೆ. 2025ರ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾಯಾಲಯ, ಟಿಇಟಿ ಅರ್ಹತೆ ಪಡೆಯಲು ಶಿಕ್ಷಕರಿಗೆ 2028 ರ ಅಗಸ್ಟ್‌ 31 ರವರೆಗೆ ಕಾಲಾವಕಾಶ ನೀಡಿದೆ.

<

ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕು ಸಂರಕ್ಷಿಸುವ ದೃಷ್ಟಿಯಿಂದ ಟಿಇಟಿ ಅಗತ್ಯವಾಗಿದ್ದು, ನಿಗದಿತ ಅವಧಿಯೊಳಗೆ ಅರ್ಹತೆ ಪಡೆಯದ ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಅವಕಾಶವಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಜಸ್ಟಿಸ್‌ ದೀಪಾಂಕರ್‌ ದತ್ತ ಹಾಗೂ ಜಸ್ಟಿಸ್‌ ಮನ್ಮೋಹನ್‌ ಅವರನ್ನೊಳಗೊಂಡ ನ್ಯಾಯಪೀಠ, ಸೇವೆಯಲ್ಲಿರುವ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಎಂಬ 2025ರ ತೀರ್ಪನ್ನು ಪುನರುಚ್ಚರಿಸಿದೆ. ಮಕ್ಕಳ ಭವಿಷ್ಯದ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಟಿಇಟಿ ಕೇವಲ ಕಾನೂನಾತ್ಮಕ ಷರತ್ತು ಮಾತ್ರವಲ್ಲ, ಸಂವಿಧಾನದ 21ಎ ವಿಧಿಯಡಿ ಮಕ್ಕಳಿಗೆ ದೊರೆಯಬೇಕಾದ ಗುಣಮಟ್ಟದ ಶಿಕ್ಷಣದ ಹಕ್ಕಿಗೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿದೆ.

2025ರ ತೀರ್ಪಿನ ಹಿನ್ನೆಲೆ

‘ಅಂಜುಮನ್‌ ಇಶಾತ್‌-ಎ-ತಾಲೀಮ್‌ ಟ್ರಸ್ಟ್‌ ವಿರುದ್ಧ ಮಹಾರಾಷ್ಟ್ರ ಸರ್ಕಾರ’ ಪ್ರಕರಣದಲ್ಲಿ 2025ರ ಸೆ. 1ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009ರ ಅನ್ವಯ ಟಿಇಟಿ ಅರ್ಹತೆ ಕಡ್ಡಾಯವಾಗಿದ್ದು, 2009ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ತಿಳಿಸಿತ್ತು.

ನಿವೃತ್ತಿಗೆ ಐದು ವರ್ಷಕ್ಕಿಂತ ಹೆಚ್ಚು ಅವಧಿ ಬಾಕಿ ಇರುವ ಶಿಕ್ಷಕರು ಎರಡು ವರ್ಷಗಳೊಳಗೆ ಟಿಇಟಿ ಪಾಸಾಗಬೇಕು ಹಾಗೂ ಬಡ್ತಿಗೂ ಟಿಇಟಿ ಅರ್ಹತೆ ಅಗತ್ಯ ಎಂದು ನ್ಯಾಯಾಲಯ ಹೇಳಿತ್ತು. ಈ ತೀರ್ಪು ಪ್ರಶ್ನಿಸಿ ವಿವಿಧ ರಾಜ್ಯ ಸರ್ಕಾರಗಳು ಹಾಗೂ ಶಿಕ್ಷಕರ ಸಂಘಟನೆಗಳು ಸುಮಾರು 70 ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದವು.

ಶಿಕ್ಷಕರ ವಾದ ತಳ್ಳಿ ಹಾಕಿದ ಕೋರ್ಟ್

2010ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರಿಗೆ ಟಿಇಟಿ ಅನ್ವಯಿಸುವುದು ಅನ್ಯಾಯ ಎಂದು ಅರ್ಜಿದಾರರು ವಾದಿಸಿದ್ದರು. ಆಗ ಜಾರಿಯಲ್ಲಿದ್ದ ನಿಯಮಗಳ ಪ್ರಕಾರವೇ ನೇಮಕಗೊಂಡಿದ್ದೇವೆ ಹಾಗೂ ಎನ್‌ಸಿಟಿಇ 2010ರ ಅಧಿಸೂಚನೆಯಲ್ಲಿ ವಿನಾಯಿತಿ ನೀಡಲಾಗಿತ್ತು ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು.

ಆದರೆ, ಟಿಇಟಿ ಪಾಸಾಗದಿದ್ದರೆ ಸಾವಿರಾರು ಶಿಕ್ಷಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಆರ್‌ಟಿಇ ಕಾಯ್ದೆ ಜಾರಿಯಾಗಿ 15 ವರ್ಷಗಳಾಗಿದ್ದು, 2017ರ ತಿದ್ದುಪಡಿ ಜಾರಿಗೆ ಬಂದು ಒಂದು ದಶಕ ಕಳೆದಿದೆ. ಇಷ್ಟು ಅವಧಿಯಲ್ಲಿ ಶಿಕ್ಷಕರು ಟಿಇಟಿ ಪಾಸಾಗಲು ಸಾಕಷ್ಟು ಅವಕಾಶವಿತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಶಿಕ್ಷಕರ ಸೇವೆಯನ್ನು ರಕ್ಷಿಸುವ ನೆಪದಲ್ಲಿ ಮಕ್ಕಳ ಗುಣಮಟ್ಟದ ಶಿಕ್ಷಣದೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

 ಮುಖ್ಯಾಂಶಗಳು

ಸೇವೆಯಲ್ಲಿರುವ ಶಿಕ್ಷಕರಿಗೂ ಟಿಇಟಿ ಕಡ್ಡಾಯ

2025ರ ತೀರ್ಪು ಮರುಪರಿಶೀಲನೆ ಅರ್ಜಿಗಳ ವಜಾ

ಟಿಇಟಿ ಅರ್ಹತೆ ಪಡೆಯಲು 2028ರ ಆಗಸ್ಟ್‌ 31ರವರೆಗೆ ಗಡುವು

ಅರ್ಹತೆ ಪಡೆಯದ ಶಿಕ್ಷಕರಿಗೆ ಸೇವೆ ಮುಂದುವರಿಸಲು ಅವಕಾಶವಿಲ್ಲ

ಮಕ್ಕಳ ಗುಣಮಟ್ಟದ ಶಿಕ್ಷಣದ ಹಕ್ಕಿಗೆ ಟಿಇಟಿ ಅಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ

ಬಡ್ತಿಗೂ ಟಿಇಟಿ ಅರ್ಹತೆ ಕಡ್ಡಾಯ ಎಂದು ನ್ಯಾಯಾಲಯ ಪುನರುಚ್ಚಾರಣೆ ಮಾಡಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *