ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್, ಒತ್ತುವರಿ, ಬೀದಿ ವ್ಯಾಪಾರ, ಅಕ್ರಮ ಪಾರ್ಕಿಂಗ್ ತೆರವಿಗೆ ಜಂಟಿ ಕಾರ್ಯಾಚರಣೆ ಡಿಸಿ ದರ್ಶನ್

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ವೃತ್ತಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಒತ್ತುವರಿ, ಅಕ್ರಮ ಪಾರ್ಕಿಂಗ್ ಮತ್ತು ಬೀದಿ ವ್ಯಾಪಾರ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

<

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಹಲವು ಜಂಕ್ಷನ್‌ಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವಿದ್ ಅಝ್ಮಿ ಮಾತನಾಡಿ, ಹಳೆಯಂಗಡಿಯಿಂದ ತಲಪಾಡಿವರೆಗೆ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್, ಝೀಬ್ರಾ ಕ್ರಾಸಿಂಗ್, ವೇಗ ನಿಯಂತ್ರಕ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಅಪಘಾತಗಳಿಗೆ ಕಾರಣವಾಗುತ್ತಿದ್ದ ಅನೇಕ ಡಿವೈಡರ್ ಕ್ರಾಸಿಂಗ್‌ಗಳನ್ನು ಮುಚ್ಚಲಾಗಿದ್ದು, ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಅಂಡರ್‌ಪಾಸ್ ಕಾಮಗಾರಿ ಹಾಗೂ ನಂತೂರು ಜಂಕ್ಷನ್ ಅಗಲೀಕರಣ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಮೀನು ಲಾರಿ ನೀರು ಸೋರಿಕೆಗೆ ಶಾಶ್ವತ ಪರಿಹಾರ

ನಗರದಲ್ಲಿ ಸಂಚರಿಸುವ ಮೀನು ಲಾರಿಗಳಿಂದ ರಸ್ತೆಗೆ ನೀರು ಸೋರಿಕೆಯಾಗುತ್ತಿರುವುದರಿಂದ ದುರ್ವಾಸನೆ ಹಾಗೂ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಲಪಾಡಿ ಮತ್ತು ಮುಲ್ಕಿಯಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ತ್ಯಾಜ್ಯ ನೀರು ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆಯಿತು. ಈ ಸಂಬಂಧ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದರು.

ಹ್ಯಾಮಿಲ್ಟನ್ ವೃತ್ತ ಮರು ವಿನ್ಯಾಸಕ್ಕೆ ಸೂಚನೆ

ಸ್ಟೇಟ್‌ಬ್ಯಾಂಕ್ ಹ್ಯಾಮಿಲ್ಟನ್ ವೃತ್ತವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಎನ್‌ಐಟಿಕೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ನಗರದ ಸಂಚಾರ ವ್ಯವಸ್ಥೆಗೆ ಮಹತ್ವದ ಯೋಜನೆಯಾಗಿರುವ ಪಂಪ್‌ವೆಲ್ ಬಸ್‌ಸ್ಟ್ಯಾಂಡ್ ನಿರ್ಮಾಣ ಕಾರ್ಯವನ್ನು ವಿಳಂಬವಿಲ್ಲದೆ ಆರಂಭಿಸುವಂತೆ ಮಹಾನಗರಪಾಲಿಕೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೀದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆ

ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಹಾಗೂ ಸೆಂಟ್ರಲ್ ಮಾರ್ಕೆಟ್ ಪ್ರದೇಶಗಳಲ್ಲಿ ಫುಟ್‌ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಮಹಾನಗರಪಾಲಿಕೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು. ಪಾಲಿಕೆಯ ಗುರುತಿನ ಚೀಟಿ ಹೊಂದಿರುವವರನ್ನು ಹೊರತುಪಡಿಸಿ ಇತರರಿಗೆ ಬೀದಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದರು.

ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ರಾಘವೇಂದ್ರ ನಾಯ್ಕ್, ಮಂಗಳೂರು ನಗರ ವ್ಯಾಪ್ತಿಯ ಸಂಚಾರ ಪೊಲೀಸ್ ಇನ್ ಸ್ಪೆಕ್ಟರ್ ಗಳು ಇದ್ದರು.

384 ಚಾಲನಾ ಪರವಾನಗಿ ಅಮಾನತು

2025ರಿಂದ 2026ರ ಏಪ್ರಿಲ್ ಅಂತ್ಯದವರೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 1,855 ಪ್ರಕರಣಗಳು, ಶಾಲಾ ವಾಹನಗಳಲ್ಲಿ ಮಿತಿಮೀರಿದ ಮಕ್ಕಳ ಸಾಗಣೆ 99 ಪ್ರಕರಣಗಳು, ಕರ್ಕಶ ಹಾರ್ನ್ ಬಳಕೆ 201 ಪ್ರಕರಣಗಳು ಹಾಗೂ ಮಿತಿಮೀರಿದ ಭಾರ ಸಾಗಣೆ 184 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿನ 433 ಮಾರಣಾಂತಿಕ ಅಪಘಾತ ಪ್ರಕರಣಗಳ ಹಿನ್ನೆಲೆಯಲ್ಲಿ 384 ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಹೈಲೈಟ್ಸ್

▶ ಜಂಕ್ಷನ್‌ಗಳಲ್ಲಿ ಒತ್ತುವರಿ ತೆರವಿಗೆ ಜಂಟಿ ಪರಿಶೀಲನೆ
▶ ಹಳೆಯಂಗಡಿ-ತಲಪಾಡಿ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮ ವಿಸ್ತರಣೆ
▶ ಮೀನು ಲಾರಿಗಳ ನೀರು ಸೋರಿಕೆ ತಡೆಗೆ ಸೆಪ್ಟಿಕ್ ಟ್ಯಾಂಕ್ ಪ್ರಸ್ತಾವನೆ
▶ ಪಂಪ್‌ವೆಲ್ ಬಸ್‌ಸ್ಟ್ಯಾಂಡ್ ಯೋಜನೆಗೆ ವೇಗ ನೀಡಲು ಸೂಚನೆ
▶ ಹ್ಯಾಮಿಲ್ಟನ್ ವೃತ್ತ ಮರು ವಿನ್ಯಾಸಕ್ಕೆ ಜಿಲ್ಲಾಧಿಕಾರಿ ಒತ್ತಾಯ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *