ಮಂಗಳೂರು: ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರುಣಿಸುವ ಉದ್ದೇಶದಿಂದ ಆರಂಭಿಸಿರುವ ಎತ್ತಿನಹೊಳೆ ಯೋಜನೆ ಕುರಿತು ಸಮಗ್ರ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಹಾಗೂ ಕರಾವಳಿಯ ಪರಿಸರ ವ್ಯವಸ್ಥೆ ರಕ್ಷಿಸಲು ಸರ್ಕಾರ ಖಚಿತ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಉಡುಪಿ ವಾರಾಹಿ ನೀರಾವರಿ ಯೋಜನೆ, ಎಡದಂಡೆ ಕಾಲುವೆ ಹಾಗೂ ಅಕ್ವಿಡಕ್ಟ್ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಿದ್ದರೂ ನಾಲ್ಕು ದಶಕಗಳ ಬಳಿಕವೂ ಪೂರ್ಣಗೊಂಡಿಲ್ಲ. ಇದೇ ರೀತಿಯಾಗಿ ಎತ್ತಿನಹೊಳೆ ಯೋಜನೆಯೂ ದೀರ್ಘಕಾಲ ವಿಳಂಬವಾಗುವ ಸಾಧ್ಯತೆ ಇದೆ ಎಂದರು.
2012ರಲ್ಲಿ ಆರಂಭವಾದ ಯೋಜನೆಗೆ ಆರಂಭದಲ್ಲಿ ₹ 9,000 ಕೋಟಿ ವೆಚ್ಚ ನಿಗದಿಪಡಿಸಲಾಗಿತ್ತು. ಬಳಿಕ ಅದು ₹13,000 ಕೋಟಿಗೆ ಏರಿಕೆಯಾಗಿದ್ದು, ಅಂತಿಮವಾಗಿ ₹23,000 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಈಗಾಗಲೇ ₹16,000 ಕೋಟಿ ವೆಚ್ಚವಾಗಿದ್ದರೂ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರವು ಬೆಂಗಳೂರು ಗ್ರಾಮಾಂತರ ಸೇರಿದಂತೆ ಏಳು ಜಿಲ್ಲೆಗಳಿಗೆ ವಾರ್ಷಿಕ 24 ಟಿಎಂಸಿ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ. ಆದರೆ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಕೇವಲ 9.55 ಟಿಎಂಸಿ ನೀರು ಮಾತ್ರ ಲಭ್ಯವಾಗಲಿದೆ. ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿ ಪಾತ್ರ ಹಾಗೂ ಈ ಭಾಗದ ಜೀವವೈವಿಧ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದರು.
ಮಂಗಳೂರು ನಗರ ಕುಡಿವ ನೀರಿನ ಪ್ರಮುಖ ಮೂಲ ಆಗಿರುವ ತುಂಬೆ ಅಣೆಕಟ್ಟಿಗೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಬೇಸಿಗೆ ವೇಳೆಯಲ್ಲಿ ನೇತ್ರಾವತಿ ನದಿ ಒಣಗುವ ಅಪಾಯ ಎದುರಾಗಬಹುದು. ಹೀಗಾಗಿ ಯೋಜನೆ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೋ, ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್ ಹಾಗೂ ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೋ ಮತ್ತು ಲೆಸ್ಲಿ ಫರ್ನಾಂಡಿಸ್ ಇದ್ದರು.
What do you feel about this post?
Like
Love
Happy
Haha
Sad
