ಬೆಂಗಳೂರು: ಮುಂಗಾರು ಮಳೆ ಹಾಗೂ ಸಂಭವನೀಯ ನೈಸರ್ಗಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿವಿಧ ಜಿಲ್ಲೆಗಳಿಗೆ ಸಚಿವರನ್ನು ಪ್ರಕೃತಿ ವಿಕೋಪ ಉಸ್ತುವಾರಿಗಳಾಗಿ ನೇಮಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಅತಿ ಹೆಚ್ಚು ಮಳೆ ಹಾಗೂ ಪ್ರಕೃತಿ ವಿಕೋಪಗಳಿಗೆ ತುತ್ತಾಗುವ ಸೂಕ್ಷ್ಮ ಪ್ರದೇಶಗಳ ಪೈಕಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನು ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ವಹಿಸಲಾಗಿದೆ. ಇದರ ಜೊತೆಗೆ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಮೇಲ್ವಿಚಾರಣೆಯ ಹೆಚ್ಚುವರಿ ಜವಾಬ್ದಾರಿ ಅವರಿಗೆ ನೀಡಲಾಗಿದೆ.
ರಾಜ್ಯದಲ್ಲಿ ತುರ್ತು ಪರಿಸ್ಥಿತಿಗಳಿಗೆ ತ್ವರಿತ ಸ್ಪಂದನೆ ನೀಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಹಾಗೂ ಸಚಿವರು ಸೇರಿದಂತೆ ಒಟ್ಟು 13 ಮಂದಿಗೆ ಜಿಲ್ಲಾವಾರು ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ. ಈ ವ್ಯವಸ್ಥೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದ್ದು, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸ್ಥಳೀಯ ಮಟ್ಟದಲ್ಲೇ ತಕ್ಷಣದ ನಿರ್ಧಾರ ಕೈಗೊಳ್ಳಲು ನೆರವಾಗಲಿದೆ.
ಜಿಲ್ಲಾ ಮಟ್ಟದಲ್ಲಿ ಪರಿಹಾರ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳುವುದು, ಹಾನಿಯ ಮೇಲ್ವಿಚಾರಣೆ ನಡೆಸುವುದು ಹಾಗೂ ಅಗತ್ಯ ನಿರ್ಧಾರಗಳನ್ನು ತಕ್ಷಣ ಜಾರಿಗೊಳಿಸುವ ಉದ್ದೇಶದಿಂದ ಈ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ರಾಜ್ಯಪಾಲರ ಆದೇಶದಂತೆ ಸರ್ಕಾರದ ಉಪ ಕಾರ್ಯದರ್ಶಿ ಎಸ್. ಶ್ರೀನಿವಾಸ್ ಅಧಿಸೂಚನೆ ಹೊರಡಿಸಿದ್ದು, ಮುಂಬರುವ ದಿನಗಳಲ್ಲಿ ಸಂಭವಿಸಬಹುದಾದ ಯಾವುದೇ ನೈಸರ್ಗಿಕ ವಿಕೋಪ ಸಂದರ್ಭಗಳಲ್ಲಿ ಸಚಿವರ ನೇರ ಮೇಲ್ವಿಚಾರಣೆಯಲ್ಲಿ ಜಿಲ್ಲಾಡಳಿತಗಳು ಕಾರ್ಯನಿರ್ವಹಿಸಲಿವೆ.
ಯಾರಿಗೆ ಯಾವ ಜಿಲ್ಲೆ?
* ಡಾ. ಜಿ. ಪರಮೇಶ್ವರ್ – ತುಮಕೂರು, ಚಿತ್ರದುರ್ಗ
* ಕೆ.ಎಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ
* ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ, ಮಂಡ್ಯ
* ಎಂ.ಬಿ. ಪಾಟೀಲ್ – ವಿಜಯಪುರ, ಬಾಗಲಕೋಟೆ
* ಕೆ.ಜೆ. ಜಾರ್ಜ್ – ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ
* ಕೃಷ್ಣ ಬೈರೇಗೌಡ – ಬೆಂಗಳೂರು ನಗರ, ಹಾಸನ
* ಈಶ್ವರ್ ಖಂಡ್ರೆ – ಬೀದರ್, ಗದಗ
* ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ, ಹಾವೇರಿ
* ಪ್ರಿಯಾಂಕ್ ಖರ್ಗೆ – ಕಲಬುರಗಿ, ಯಾದಗಿರಿ
* ಡಾ. ಶರಣಪ್ರಕಾಶ್ ಪಾಟೀಲ್ – ರಾಯಚೂರು, ಕೊಪ್ಪಳ
* ಬೈರತಿ ಸುರೇಶ್ – ಕೋಲಾರ, ಚಿಕ್ಕಬಳ್ಳಾಪುರ
* ಡಾ. ಯತೀಂದ್ರ ಸಿದ್ದರಾಮಯ್ಯ – ಮೈಸೂರು, ಚಾಮರಾಜನಗರ
What do you feel about this post?
Like
Love
Happy
Haha
Sad



