ಸುಳ್ಯ: ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮ ಬದುಕನ್ನೇ ಸಮರ್ಪಿಸಿ, ಅತ್ಯಂತ ಕಡಿಮೆ ವೆಚ್ಚದಲ್ಲಿ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ದೇಶದಾದ್ಯಂತ ‘ಬ್ರಿಡ್ಜ್ ಮ್ಯಾನ್’ ಹಾಗೂ ‘ತೂಗು ಸೇತುವೆಗಳ ಸರದಾರ’ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಸೋಮವಾರ ಬೆಳಿಗ್ಗೆ ಅನಾರೋಗ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಗ್ರಾಮೀಣ ಜನರ ಬದುಕಿಗೆ ಸೇತುವೆಯಾಗಿ ನಿಂತಿದ್ದ ಅಪರೂಪದ ತಾಂತ್ರಿಕ ಸಾಧಕನ ಅಗಲಿಕೆಗೆ ರಾಜ್ಯದಾದ್ಯಂತ ತೀವ್ರ ಶೋಕ ತಂದಿದೆ.
ಇಬ್ಬರು ಪುತ್ರರು ಮತ್ತು ಪುತ್ರಿ ಸೇರಿದಂತೆ ಬಂಧು ಬಳವನ್ನು ಇದ್ದಾರೆ. ಪದ್ಮಶ್ರೀ ಪುರಸ್ಕೃತ ಸುಳ್ಯದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಮಂಗಳವಾರ ಸರ್ಕಾರಿ ಗೌರವದ ಜತೆಗೆ ಅಂತ್ಯ ಸಂಸ್ಕಾರ ನಡೆಯಿತು. ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಂತ್ಯಕ್ರಿಯೆ ವಿಧಿಗಳು ಸರಕಾರಿ ಗೌರವಗಳೊಂದಿಗೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಡಾ. ಗಿರೀಶ್ ಭಾರದ್ವಾಜ್ ಅವರು ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಗ್ರಾಮೀಣ ಅಭಿವೃದ್ಧಿಯನ್ನೇ ತಮ್ಮ ಜೀವನದ ಧ್ಯೇಯ ಮಾಡಿಕೊಂಡವರು. 1989 ರಲ್ಲಿ ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಿದ ಮೊದಲ ತೂಗು ಸೇತುವೆಯಿಂದ ಆರಂಭವಾದ ಅವರ ಪಯಣ, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ಓಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 300 ಕ್ಕೂ ಅಧಿಕ ತೂಗುಸೇತುವೆಗಳ ನಿರ್ಮಾಣದ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದೆ.
ಸಾಂಪ್ರದಾಯಿಕ ಸೇತುವೆಗಳಿಗಿಂತ ಕಡಿಮೆ ವೆಚ್ಚದಲ್ಲಿ, ಸ್ಥಳೀಯರ ಶ್ರಮದ ಜತೆಗೆ ಪರಿಸರ ಸ್ನೇಹಿಯಾಗಿ ನಿರ್ಮಿಸುತ್ತಿದ್ದ ಅವರ ತೂಗು ಸೇತುವೆಗಳು ನೂರಾರು ಗ್ರಾಮಗಳ ಜನಜೀವನಕ್ಕೆ ಹೊಸ ಆಶಾಕಿರಣಗಳಾಗಿದ್ದವು. ಗ್ರಾಮೀಣ ಜನರ ಬದುಕಿಗೆ ನೀಡಿದ ಈ ಅಪೂರ್ವ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರ 2017 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಸಂಸ್ಥೆಗಳು ಗೌರವ ಡಾಕ್ಟರೇಟ್ ಪ್ರದಾನ ಮಾಡಿವೆ.
What do you feel about this post?
Like
Love
Happy
Haha
Sad



