ಮಂಗಳೂರು: ಶೈನ್ ಫೌಂಡೇಷನ್ ಕರ್ನಾಟಕ ಆಕ್ಸಿಲರೇಷನ್ ನೆಟ್ವರ್ಕ್ (ಕೆಎಎನ್) ಉಪಕ್ರಮದಡಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕ್ಯಾಂಪಸ್ನಲ್ಲಿ 2 ದಿನಗಳ ಕಾಲ ಆಯೋಜಿಸಿದ್ದ ವಿಸ್ತಾರಾ–2026 ಮುಕ್ತ ಸಂವಾದ ಮತ್ತು ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಎರಡು ದಿನಗಳ ಕಾರ್ಯಕ್ರಮದಲ್ಲಿ 55 ಕ್ಕೂ ಹೆಚ್ಚು ನವೋದ್ಯಮ ಸಂಸ್ಥಾಪಕರು, ಉದ್ಯಮಿಗಳು, ವಿದ್ಯಾರ್ಥಿಗಳು, ಪರಿಸರ ವ್ಯವಸ್ಥೆಯ ಪ್ರತಿನಿಧಿಗಳು ಹಾಗೂ ನಾವೀನ್ಯಕಾರರು ಭಾಗವಹಿಸಿ ಉದ್ಯಮಶೀಲತೆ, ಹೂಡಿಕೆ, ಸಹಯೋಗ ಮತ್ತು ವ್ಯವಹಾರ ಬೆಳವಣಿಗೆಯ ಕುರಿತು ಚರ್ಚಿಸಿದರು.
ಕಾರ್ಯಕ್ರಮವನ್ನು ಸಿಎಸ್ ಮನು ಫ್ರಾನ್ಸಿಸ್, ರೋಹಿತ್ ಅನಂತ್, ಕೃಷ್ಣ ಹೆಗ್ಡೆ, ಡಾ. ಎಸ್.ಎಸ್. ಇಂಜಗನೇರಿ, ನಂಜುಂಡ ಪ್ರತಾಪ್ ಪಾಲೆಕಂಡ, ಭರತ್ ಓಸ್ವಾಲ್ ಹಾಗೂ ಜಾನ್ಸನ್ ಟೆಲ್ಲಿಸ್ ಉದ್ಘಾಟಿಸಿದರು.

ಕಾರ್ಯಾಗಾರದಲ್ಲಿ ಸಿಎಸ್ ಮನು ಫ್ರಾನ್ಸಿಸ್ ಅವರು ಸ್ಟಾರ್ಟ್ಅಪ್ ಮೌಲ್ಯಮಾಪನ ಮತ್ತು ನಿಧಿ ಸಂಗ್ರಹಣೆಯ ಕುರಿತು, ನಂಜುಂಡ ಪ್ರತಾಪ್ ಪಾಲೆಕಂಡ ಅವರು ವಿಸ್ತರಿಸಬಹುದಾದ ಉದ್ಯಮ ನಿರ್ಮಾಣದ ಕುರಿತು, ಭರತ್ ಓಸ್ವಾಲ್ ಅವರು ಹೂಡಿಕೆದಾರರ ಸಿದ್ಧತೆ, ಮಾರುಕಟ್ಟೆ ತಂತ್ರ ಹಾಗೂ ಬ್ರ್ಯಾಂಡ್ ಸ್ಥಾನೀಕರಣದ ಕುರಿತು, ಎಸ್.ಎಲ್. ಶ್ರೀರಾಮ್ ಅವರು ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಮತ್ತು ನಿಯಂತ್ರಣ ಚೌಕಟ್ಟಿನ ಕುರಿತು ಹಾಗೂ ಸಿಎ ಗೌತಮ್ ಪೈ ಅವರು ಹಣಕಾಸು ಯೋಜನೆ ಮತ್ತು ಬಂಡವಾಳ ಪ್ರವೇಶದ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಕೆಎಎನ್ ಕಾರ್ಯಕ್ರಮ ಮುಖ್ಯಸ್ಥ ಸುವಿನ್ ಹಾಗೂ ಮಂಗಳೂರು ಕ್ಲಸ್ಟರ್ ಮುಖ್ಯಸ್ಥ ವೈಶಾಕ್ ಪೈ ಅವರು ವಿಶೇಷ ಭಾಷಣ ಮಾಡಿ, ಬೆಂಗಳೂರಿನಾಚೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಕಾರ್ಯಾಗಾರದಲ್ಲಿ ಆರಂಭಿಕ ಸಂಸ್ಥೆಗಳ ಮೌಲ್ಯಮಾಪನ, ಹೂಡಿಕೆದಾರರ ಸಿದ್ಧತೆ, ಮಾರುಕಟ್ಟೆ ತಂತ್ರ, ಹಣಕಾಸು ಯೋಜನೆ, ಗುಣಮಟ್ಟ ನಿರ್ವಹಣೆ ಹಾಗೂ ನಿಯಂತ್ರಣ ವ್ಯವಸ್ಥೆಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಸಂಸ್ಥಾಪಕರು, ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ಉದ್ಯಮ ತಜ್ಞರ ನಡುವೆ ನೆಟ್ವರ್ಕಿಂಗ್ಗೆ ಅವಕಾಶ ಕಲ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ರೋಹಿತ್ ಅನಂತ್, ಸಂಜೀವ್ ಚಿತ್ರೆ, ಭರತ್ ಓಸ್ವಾಲ್, ಎಸ್.ಎಲ್. ಶ್ರೀರಾಮ್, ಸಿಎಸ್ ಮನು ಫ್ರಾನ್ಸಿಸ್, ನಂಜುಂಡ ಪ್ರತಾಪ್ ಪಾಲೆಕಂಡ ಹಾಗೂ ಸಿಎ ಗೌತಮ್ ಪೈ ಸೇರಿದಂತೆ ಹಲವು ಉದ್ಯಮ ತಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು.
What do you feel about this post?
Like
Love
Happy
Haha
Sad



