ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇರುವ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜತೆಗೆ ವಿಲೀನ ಮಾಡಿರುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದ್ದು, ಸರಕಾರದ ಆರೋಗ್ಯ ಇಲಾಖೆಯ ಯೋಜನೆಗಳಿಂದ ವಂಚಿತರಾಗುವಂತಹ ಸ್ಥಿತಿ ನಿರ್ಮಾಣ ಆಗಿದ್ದು, ಈ ಆದೇಶವನ್ನು ಸರಕಾರ ಕೂಡಲೇ ರದ್ದು ಮಾಡಿ ಕಾರವಾರದಲ್ಲಿ ಜಿಲ್ಲಾ ಆಸ್ಪತ್ರೆ ಅಥವಾ ತಾಲ್ಲೂಕು ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಸೂರಜ ಮಧುಕರ ಕುರುಮಕರ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾರಂಭದ ನಂತರ ಇಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆ ಬೋಧಕ ಆಸ್ಪತ್ರೆಯನ್ನಾಗಿ ವೈದ್ಯಕೀಯ ಕಾಲೇಜು ಜತೆಗೆ ವಿಲೀನ ಮಾಡಲಾಗಿದೆ. ಪರಿಣಾಮ ಸಾಕಷ್ಟು ನುರಿತ ವೈದ್ಯರನ್ನು ಬೇರೆ ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ. ಈಗ ಬೋಧನೆಗೆ ಅಷ್ಟೇ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದ್ದು, ರೋಗಿಗಳ ಚಿಕಿತ್ಸೆಗೆ ಹೆಚ್ಚು ಒತ್ತು ಸಿಗುತ್ತಿಲ್ಲ. ಸಾಕಷ್ಟು ಸರಕಾರದ ಉಚಿತ ಯೋಜನೆಗಳಿಂದ ರೋಗಿಗಳು ವಂಚಿತರಾಗುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಸುಪರ್ಧಿಯಲ್ಲಿ ಇದ್ದ ಜಿಲ್ಲಾ ಆಸ್ಪತ್ರೆ ಬೇರೆಡೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರನ್ನು ಈಗಾಗಲೇ ಬೇರೆ ಬೇರೆ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳಿಂದ ಸಾರ್ವಜನಿಕರು ವಂಚಿತ ಆಗುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುತ್ತಿರುವ ಸೌಲಭ್ಯಗಳಿಗೆ ಬಡವರು ವೈದ್ಯಕೀಯ ಆಸ್ಪತ್ರೆಯಲ್ಲಿ ವೆಚ್ಚ ಭರಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಕ್ರಿಮ್ಸ್ ಜತೆಗೆ ವಿಲೀನದ ನಂತರ ಸಾಮಾಜಿಕ ಭದ್ರತಾ ಯೋಜನೆ ಅಡಿ ಸಿಗುವ ಅಂಗವಿಕಲರ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ಪ್ರಮಾಣ ಪತ್ರಗಳಿಗಾಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸುತ್ತಬೇಕಾದ ಸ್ಥಿತಿ ಇದೆ. ಈ ಹಿಂದೆ ಕಾರವಾರದಲ್ಲಿದ್ದ ಜಿಲ್ಲಾ ಆಸ್ಪತ್ರೆ ಪುನಃ ಪ್ರಾರಂಭ ಮಾಡಬೇಕು ಎಂದು ಜಿಲ್ಲಾಧಿಕಾರಿ, ಶಾಸಕರು, ಕ್ರಿಮ್ಸ್ ನಿರ್ದೇಶಕರು, ಡಿಎಚ್ ಒ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
