ಕಾರವಾರ: ಎರಡು ದಶಕಗಳ ಕಾಲ ಭಾರತದ ಸಮುದ್ರ ಗಡಿ ಹಾಗೂ ಕರಾವಳಿ ಭದ್ರತೆಯಲ್ಲಿ ಮಹತ್ವದ ಸೇವೆ ಸಲ್ಲಿಸಿದ ಭಾರತೀಯ ತಟರಕ್ಷಣಾ ಪಡೆಯ ‘ಸಾವಿತ್ರಿಬಾಯಿ ಫುಲೆ’ ನೌಕೆಗೆ ಶನಿವಾರ ಸಂಜೆ ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ಗೌರವಯುತ ವಿದಾಯ ನೀಡಲಾಯಿತು. ಇದರೊಂದಿಗೆ ನೌಕೆಯನ್ನು ಅಧಿಕೃತವಾಗಿ ಸೇವೆಯಿಂದ ಡಿ-ಕಮಿಷನ್ ಮಾಡಲಾಯಿತು.
ಸೂರ್ಯಾಸ್ತದ ಬಳಿಕ ನಡೆದ ಸಮಾರಂಭದಲ್ಲಿ ನೌಕೆಯ ಮೇಲಿದ್ದ ಭಾರತೀಯ ತಟರಕ್ಷಣಾ ಪಡೆಯ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಕೊನೆಯ ಬಾರಿಗೆ ಗೌರವಪೂರ್ವಕವಾಗಿ ಕೆಳಗಿಳಿಸಲಾಯಿತು. ಬಳಿಕ ನೌಕೆಯ ಉದ್ದಕ್ಕೆ ಸಮನಾದ ವಿಶೇಷ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ಸೇವಾ ನಿವೃತ್ತಿಯನ್ನು ಘೋಷಿಸಲಾಯಿತು. ತಟರಕ್ಷಣಾ ಪಡೆಯ ಸಿಬ್ಬಂದಿಯಿಂದ ಗೌರವ ವಂದನೆಯನ್ನೂ ಸಲ್ಲಿಸಲಾಯಿತು.
78 ಸಾವಿರಕ್ಕೂ ಅಧಿಕ ನಾಟಿಕಲ್ ಮೈಲು ಗಸ್ತು
ಕಾರ್ಯಕ್ರಮದಲ್ಲಿ ಮಾತನಾಡಿದ ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ‘ಸಾವಿತ್ರಿಬಾಯಿ ಫುಲೆ’ ಕೇವಲ ಉಕ್ಕು ಮತ್ತು ಯಂತ್ರಗಳಿಂದ ನಿರ್ಮಿಸಲಾದ ನೌಕೆಯಲ್ಲ. ಅದರಲ್ಲಿದ್ದ ಕಮಾಂಡರ್ಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಅದು ಜೀವಂತ ಶಕ್ತಿಯಾಗಿ ಕಾರ್ಯನಿರ್ವಹಿಸಿತ್ತು ಎಂದರು.
ಕಳೆದ ಎರಡು ದಶಕಗಳಲ್ಲಿ ಕಠಿಣ ಹವಾಮಾನ, ಮಳೆ ಹಾಗೂ ಬಿರುಗಾಳಿಯ ನಡುವೆಯೂ ನೌಕೆ ನಿರಂತರವಾಗಿ ಗಸ್ತು ನಡೆಸಿ ಭಾರತದ ಸಮುದ್ರ ಗಡಿ ಮತ್ತು ಕರಾವಳಿ ಭದ್ರತೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರು ಹಾಗೂ ನಾವಿಕರಿಗೆ ನೆರವಿನ ಆಶಾಕಿರಣವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದರು.
ದೇಶದ ಭದ್ರತೆಗೆ ಸವಾಲು ಒಡ್ಡುವ ದುಷ್ಟಶಕ್ತಿಗಳಿಗೆ ಕಟ್ಟುನಿಟ್ಟಿನ ಪ್ರತ್ಯುತ್ತರದ ಸಂಕೇತವಾಗಿಯೂ ನೌಕೆ ಕಾರ್ಯನಿರ್ವಹಿಸಿದೆ. ಸಕ್ರಿಯ ಸೇವೆಯಿಂದ ನಿವೃತ್ತಿಯಾಗುತ್ತಿದ್ದರೂ ಕರಾವಳಿ ಕಾವಲು ಪಡೆಯ ಇತಿಹಾಸದಲ್ಲಿ ‘ಸಾವಿತ್ರಿಬಾಯಿ ಫುಲೆ’ಯ ಕೊಡುಗೆ ಮತ್ತು ಪರಂಪರೆ ಸದಾ ಸ್ಮರಣೀಯವಾಗಿರಲಿದೆ ಎಂದರು.
ನೌಕೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳು, ನಾವಿಕರು, ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್ಗಳು, ವಿದ್ಯುತ್ ತಜ್ಞರು, ಶಸ್ತ್ರಾಸ್ತ್ರ ತಜ್ಞರು ಹಾಗೂ ವ್ಯವಸ್ಥಾಪನಾ ತಂಡದ ಸೇವೆಯನ್ನು ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಶ್ಲಾಘಿಸಿದರು.

71 ಜೀವಗಳ ರಕ್ಷಣೆ
‘ಸಾವಿತ್ರಿಬಾಯಿ ಫುಲೆ’ ನೌಕೆಯ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಗೌರವ್ ಶ್ರೀವಾಸ್ತವ ಮಾತನಾಡಿ, ಅಕ್ಟೋಬರ್ 28, 2006ರಂದು ಸೇವೆಗೆ ಸೇರ್ಪಡೆಗೊಂಡ ನೌಕೆ ಕಳೆದ 20 ವರ್ಷಗಳಲ್ಲಿ ದೇಶದ ಸಮುದ್ರ ಗಡಿ ಕಾವಲಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.
ಈ ಅವಧಿಯಲ್ಲಿ ನೌಕೆಯು ಸುಮಾರು 78,468 ನಾಟಿಕಲ್ ಮೈಲಿಗಳಷ್ಟು ಗಸ್ತು ನಡೆಸಿದೆ. 14 ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಹಾಗೂ ನಾಲ್ಕು ವೈದ್ಯಕೀಯ ತೆರವು ಕಾರ್ಯಾಚರಣೆಗಳನ್ನು ಕೈಗೊಂಡು 71 ಮಂದಿಯ ಜೀವಗಳನ್ನು ರಕ್ಷಿಸಿದೆ. ಅಲ್ಲದೆ, ಎರಡು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ತಿಳಿಸಿದರು.
2006–07, 2010–11 ಹಾಗೂ 2014ರಲ್ಲಿ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಯನ್ನೂ ನೌಕೆ ಪಡೆದುಕೊಂಡಿದೆ. ಗೋವಾ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಸ್ವದೇಶಿಯಾಗಿ ನಿರ್ಮಿಸಲ್ಪಟ್ಟ ಈ ನೌಕೆ ಆತ್ಮನಿರ್ಭರ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್ಒ ಆಂತೋಣಿ ಮರಿಯಪ್ಪ, ಸಿಐಎಸ್ಎಫ್ ಕೈಗಾದ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಾಡ್ಕರ್ ಸೇರಿದಂತೆ ಹಲವು ಗಣ್ಯರು ಇದ್ದರು.
What do you feel about this post?
Like
Love
Happy
Haha
Sad







