ಮೂಡುಬಿದಿರೆ ಮಿಜಾರಿನಲ್ಲಿ ಆಳ್ವಾಸ್ ವೈದ್ಯಕೀಯ ಕಾಲೇಜು ಲೋಕಾರ್ಪಣೆ: ಆಳ್ವಾಸ್ ಗೆ ತಿಂಗಳೊಳಗೆ ಡೀಮ್ಡ್ ವಿವಿ ಮಾನ್ಯತೆ: ಸಚಿವ ಪ್ರಹ್ಲಾದ್ ಜೋಶಿ

ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನದ ಪ್ರಸ್ತಾವನೆಗೆ ಸಂಬಂಧಿಸಿದ ಅಗತ್ಯ ಸ್ಪಷ್ಟೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಒಂದು ತಿಂಗಳೊಳಗೆ ಅನುಮೋದನೆ ನೀಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದರು.

<

ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಒಂದೇ ಡೀಮ್ಡ್ ಯೂನಿವರ್ಸಿಟಿಯ ಅಡಿಯಲ್ಲಿ ತಂದು, ಅದನ್ನು ಜಾಗತಿಕ ಮಟ್ಟದ ಶ್ರೇಷ್ಠ ಶಿಕ್ಷಣ ಸಂಸ್ಥೆಯಾಗಿ ಬೆಳೆಸುವ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರಬೇಕು. ವಿದ್ಯಾರ್ಥಿಗಳು ಕೌಶಲದ ಜತೆಗೆ ಧೈರ್ಯ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜ ಸೇವೆಯ ಸಂಕಲ್ಪ ಭಾರತದಲ್ಲಿ ಬಲವಾಗಿದೆ ಎಂದು ಅವರು ಹೇಳಿದರು.

ಯುವಜನರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಮೇಲೆ ಶಿಕ್ಷಣ ಹಾಗೂ ಸಾಧನೆಯ ಹೆಸರಿನಲ್ಲಿ ಅತಿಯಾದ ಒತ್ತಡ ಹೇರುವುದನ್ನು ಪೋಷಕರು ತಪ್ಪಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ದೇಶದಲ್ಲಿ ಪ್ರಸ್ತುತ ಸುಮಾರು 1.4 ಲಕ್ಷ ವೈದ್ಯಕೀಯ ಸೀಟುಗಳಿವೆ. ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಭಾರತ ವೇಗವಾಗಿ ಮುನ್ನಡೆಯುತ್ತಿದ್ದು, ದೇಶದಲ್ಲಿ 1.03 ಲಕ್ಷ ಪೇಟೆಂಟ್‌ಗಳು ಹಾಗೂ 2.3 ಲಕ್ಷ ಸ್ಟಾರ್ಟ್‌ಅಪ್‌ಗಳು ಇರುವುದಾಗಿ ಪ್ರಹ್ಲಾದ್ ಜೋಶಿ ತಿಳಿಸಿದರು.

ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಟಾರ್ಟ್‌ಅಪ್‌ಗಳು ಹೊರಹೊಮ್ಮಬೇಕು. ವೈದ್ಯಕೀಯ ಕ್ಷೇತ್ರದಲ್ಲಿಯೂ ಹೊಸ ಆಲೋಚನೆಗಳು, ಸಂಶೋಧನೆಗಳು ಮತ್ತು ಯೋಜನೆಗಳು ರೂಪುಗೊಳ್ಳಬೇಕು ಎಂದು ಅವರು ಆಶಿಸಿದರು.

ಯುವಜನತೆಗೆ ಇಂದು ಸಾಕಷ್ಟು ಅವಕಾಶಗಳಿದ್ದು, ಸಂಶೋಧನೆ ಮತ್ತು ನವೋದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಸ್ತುತ ಸಂಶೋಧನಾ ಕ್ಷೇತ್ರಕ್ಕೆ ರೂ.2.5 ಲಕ್ಷ ಕೋಟಿ ಮೀಸಲಿಟ್ಟಿದೆ ಎಂದು ಅವರು ಹೇಳಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆಳ್ವಾಸ್ ಮೆಡಿಕಲ್ ಕಾಲೇಜಿನ ಆರಂಭದ ಮೂಲಕ ಶಿಕ್ಷಣ ಪ್ರೇಮಿಗಳ ಬೇಡಿಕೆ, ಡಾ. ಮೋಹನ ಆಳ್ವ ಅವರ ಕನಸು ಹಾಗೂ ಜನರ ಅಪೇಕ್ಷೆ ಈಡೇರಿದೆ ಎಂದರು.

ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆ ಜನರಿಗೆ ದೊರೆಯಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಕೇಂದ್ರದ ವಿವಿಧ ನೀತಿಗಳ ಪರಿಣಾಮ ಆರೋಗ್ಯ ಕ್ಷೇತ್ರದಲ್ಲಿ ವೇಗದ ಅಭಿವೃದ್ಧಿ ಕಾಣುತ್ತಿದೆ. ಕ್ಷಯಮುಕ್ತ ಭಾರತ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ವೈದ್ಯಕೀಯ ದಿಗ್ಗಜರ ಸ್ಮರಣೆಗೆ ವಿಭಾಗಗಳಿಗೆ ಹೆಸರು

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಮೆಡಿಕಲ್ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿಸಿದರು.

ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರನ್ನು ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಇಡಲಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ಶಾಸಕ ಉಮಾನಾಥ ಎ. ಕೋಟ್ಯಾನ್, ವಿಶ್ರಾಂತ ಕುಲಪತಿಗಳಾದ ಡಾ. ಎಸ್. ಕಾಂತಾ, ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ಡಾ. ರಮಾನಂದ ಶೆಟ್ಟಿ, ಡಾ. ಎಸ್. ಸಚ್ಚಿದಾನಂದ, ಡಾ. ಜಯಕರ್ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಸೇರಿದಂತೆ ಶಿಕ್ಷಣ, ಆರೋಗ್ಯ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.

ಲಕ್ಷ್ಮೀ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಜೆ. ಶೆಟ್ಟಿ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಅಬ್ದುಲ್ ಕುಂಞ್ಞಿ, ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ಫೌಸ್ಟಿನ್ ಲ್ಯೂಕಸ್ ಲೋಬೋ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಚಿದಾನಂದ ಗೌಡ, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕರಾವಳಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಪ್ರಮುಖರಾದ ಎಸ್. ಗಣೇಶ್ ರಾವ್, ಡಾ. ರಾಜೇಶ್ ಶೆಟ್ಟಿ, ಡಾ. ಪ್ರಕಾಶ್ ಶೆಟ್ಟಿ, ಕಿಶೋರ್ ಆಳ್ವ, ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ರಾಮಚಂದ್ರ ಶೆಟ್ಟಿ, ಶ್ರೀನಿವಾಸ ಆಳ್ವ, ಶ್ರೀಪತಿ ಭಟ್, ಕುಲದೀಪ್ ಎಂ., ಡಾ. ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಶಾಂತಾರಾಮ್ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಡಾ. ಅಮರಶ್ರೀ, ಡಾ. ಶಿವಶರಣ್ ಶೆಟ್ಟಿ, ಪ್ರವೀಣ್ ಕುಮಾರ್, ಪಂಕಜಾ ಶಂಕರ ನಾಯಕ್, ಮಂಜರಿ ಪ್ರವೀಣ್, ಎಂ.ಬಿ. ಪುರಾಣಿಕ್, ಮುಸ್ತಫಾ ಎಸ್.ಎಂ., ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಗ್ರೀಷ್ಮಾ ವಿವೇಕ್ ಆಳ್ವ, ಹನ್ನಾ ವಿನಯ್ ಆಳ್ವ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಟ್ರಸ್ಟಿಗಳಾದ ವಿವೇಕ್ ಆಳ್ವ ಹಾಗೂ ಡಾ. ವಿನಯ್ ಆಳ್ವ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh