ಮಂಗಳೂರು ವೆನ್ಲಾಕ್‌ನಲ್ಲಿ ಮಹಾನ್ ಅಂಗದಾನ, ಇಬ್ಬರಿಗೆ ನವ ಜೀವನಕ್ಕೆ ನಾಂದಿ: ಡಾ. ಶಿವಪ್ರಕಾಶ್

ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಮೆದುಳು ಮರಣದ ಬಳಿಕ ಅಂಗಾಂಗಗಳನ್ನು ದಾನ ಮಾಡುವ ಮೂಲಕ ನಾಲ್ವರು ರೋಗಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ ಪ್ರಕಾಶ್ ಆಚಾರ್ಯ ಅವರ ಕುಟುಂಬದ ಮಾನವೀಯ ನಿರ್ಧಾರಕ್ಕೆ ಗೌರವಪೂರ್ವಕ ನಮನ ಸಲ್ಲಿಸುವುದಾಗಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್. ತಿಳಿಸಿದ್ದಾರೆ

<

ಉಳ್ಳಾಲ ತಾಲ್ಲೂಕಿನ ಕೋಟೇಕಾರ್ ಸಮೀಪದ ಬೀರಿ, ಮದೂರು ಸೈಟ್ ನಿವಾಸಿ ಪ್ರಕಾಶ್ ಆಚಾರ್ಯ ಅವರು ಸೆಪ್ಟೆಂಬರ್ 14ರಂದು ಮನೆಯ ಮುಂದೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಅವರನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದರು.

ಮೆದುಳು ಮರಣ ಘೋಷಣೆಗೆ ನಿಗದಿಪಡಿಸಿದ ವೈದ್ಯಕೀಯ ಪರೀಕ್ಷೆಗಳು ಮತ್ತು ಮೌಲ್ಯಮಾಪನಗಳನ್ನು ಪೂರ್ಣಗೊಳಿಸಿದ ಬಳಿಕ ಸೆಪ್ಟೆಂಬರ್ 17ರಂದು ಅವರನ್ನು ಮೆದುಳು ಮರಣ ಹೊಂದಿದವರು ಎಂದು ಘೋಷಿಸಲಾಯಿತು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದು, ಸೆಪ್ಟೆಂಬರ್ 19ರಂದು ಅಂಗಾಂಗ ಸಂಗ್ರಹ ಪ್ರಕ್ರಿಯೆ ನಡೆಯಿತು. ಕೆಎಂಸಿ ಮಣಿಪಾಲದ ತಂಡವು ಎರಡು ಮೂತ್ರಪಿಂಡಗಳನ್ನು ಸಂಗ್ರಹಿಸಿದ್ದು, ಅವು ಡಯಾಲಿಸಿಸ್ ಪಡೆಯುತ್ತಿರುವ ಇಬ್ಬರು ರೋಗಿಗಳಿಗೆ ಕಸಿ ಮಾಡಲು ಬಳಸಲಾಗುತ್ತದೆ. ಕೆಎಂಸಿ ಅತ್ತಾವರ ತಂಡವು ಎರಡು ಕಣ್ಣಿನ ಕಾರ್ನಿಯಾಗಳನ್ನು ಸಂಗ್ರಹಿಸಿದ್ದು, ಇದರಿಂದ ಇಬ್ಬರು ರೋಗಿಗಳಿಗೆ ದೃಷ್ಟಿ ಮರಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಹಲವು ತಂಡಗಳ ಸಮನ್ವಯ

ಅಂಗದಾನ ಪ್ರಕ್ರಿಯೆಯನ್ನು ವೈದ್ಯಕೀಯ ತಂಡಗಳ ಸಮನ್ವಯದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಡಾ. ಜೆಕೊ ಜೇಕಬ್, ಡಾ. ಮೇಘನಾ ಮಾಢಿ, ಡಾ. ಶರತ್ ಬಾಬು, ಡಾ. ಅಭಿಷೇಕ್ ಆಚಾರ್ಯ, ಡಾ. ರೆನಿಟಾ ಸೇರಿದಂತೆ ವಿವಿಧ ವಿಭಾಗಗಳ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಡಾ. ಅಭಿಷೇಕ್ ಆಚಾರ್ಯ ಮತ್ತು ಡಾ. ರೆನಿಟಾ ಅವರು ಅಂಗದಾನ ಪ್ರಕ್ರಿಯೆಗೆ ಚಾಲನೆ ನೀಡಿದರು.

ಡಾ. ಸದಾನಂದ ಪೂಜಾರಿ ಮತ್ತು ಡಾ. ರೋಹನ್ ಶೆಟ್ಟಿ ಅವರ ಮಾರ್ಗದರ್ಶನ, ಆರ್‌ಎಂಒ ಡಾ. ಮಧುಸೂದನ್, ಎಂಐಸಿಯು ನರ್ಸಿಂಗ್ ತಂಡ ಹಾಗೂ ಸಹಾಯಕ ಸಿಬ್ಬಂದಿಯ ಸಮನ್ವಯವೂ ಮಹತ್ವದ ಪಾತ್ರ ವಹಿಸಿತು. ಪೋಸ್ಟ್‌ಮಾರ್ಟಂ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಫೊರೆನ್ಸಿಕ್ ವೈದ್ಯರಾದ ಡಾ. ರಮೇಶ್ ಹಾಗೂ ಅವರ ತಂಡ ಸಹಕರಿಸಿತು.

ಎಸ್‌ಒಟಿಟಿಒ ತಂಡದ ಸಹಕಾರ

ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯ ಸಂಯೋಜಕ ನೌಶಾದ್, ಉಪನಿರ್ದೇಶಕ ಡಾ. ಅರುಣ್ ಕುಮಾರ್, ರಾಜ್ಯ ಸಂಚಾಲಕ ಡಾ. ರವಿರಾಜ್ ಶೆಟ್ಟಿ, ವಲಯ ಸಂಯೋಜಕಿ ಪದ್ಮಾ ಹಾಗೂ ಸಲಹೆಗಾರ್ತಿ ಶಿಲ್ಪಾ ಅವರ ಮಾರ್ಗದರ್ಶನ ಮತ್ತು ಸಮನ್ವಯಕ್ಕೆ ಆಸ್ಪತ್ರೆ ಕೃತಜ್ಞತೆ ಸಲ್ಲಿಸಿದೆ.

ಶಸ್ತ್ರಚಿಕಿತ್ಸಾ ಕೊಠಡಿ, ಅರಿವಳಿಕೆ, ಮೂತ್ರಶಾಸ್ತ್ರ, ನರ್ಸಿಂಗ್, ತಾಂತ್ರಿಕ ಹಾಗೂ ಸಹಾಯಕ ಸಿಬ್ಬಂದಿಯ ಸಹಕಾರದಿಂದ ಅಂಗಾಂಗ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡಿತು. ಆರ್‌ಎಂಒ, ಆಡಳಿತ, ಔಷಧಾಲಯ, ಸರಬರಾಜು, ನರ್ಸಿಂಗ್, ಎಂಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿಗೂ ಆಸ್ಪತ್ರೆ ಧನ್ಯವಾದ ಸಲ್ಲಿಸಲಿದ್ದು, ಅವರು ಪ್ರಕಾಶ್ ಆಚಾರ್ಯ ಅವರ ಕುಟುಂಬದ ಮಹಾನ್ ನಿರ್ಧಾರಕ್ಕೆ ಗೌರವಪೂರ್ವಕ ನಮನ ಸಲ್ಸುತ್ತೇವೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh