ಮಂಗಳೂರು: ಕೈಗಾರಿಕೆಗಳಿಗೆ ಅಗತ್ಯ ಇರುವ ಹೈಡ್ರೋಜನ್ ಅನ್ನು ಅವುಗಳ ಆವರಣದಲ್ಲೇ ಉತ್ಪಾದಿಸುವ ಮೂಲಕ ಸಾಗಣೆ ಮತ್ತು ಸಂಗ್ರಹಣೆಯ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ಮಂಗಳೂರಿನ ಗಂಜಿಮಠದಲ್ಲಿ ನೂತನ ತಯಾರಿಕಾ ಘಟಕ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಇದೇ 15 ರಂದು ‘ಹೈಡ್ಜೆನ್ ನವೀನ ತಂತ್ರಜ್ಞಾನ ದಿನ–2026’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೃಷ್ಣ ಕುಮಾರ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಂಜಿಮಠದ ಘಟಕವು ವಾರ್ಷಿಕ 20 ಮೆಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಹೈಡ್ರೋಜನ್ ಉತ್ಪಾದನೆಗೆ ಅಗತ್ಯವಿರುವ ವಿದ್ಯುದ್ವಿಚ್ಛೇದಕಗಳನ್ನು ಇಲ್ಲಿಯೇ ವಿನ್ಯಾಸಗೊಳಿಸಿ, ಜೋಡಿಸಿ ಮತ್ತು ಪರೀಕ್ಷಿಸಲಾಗುತ್ತದೆ. ಭಾರತೀಯ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ಇಂತಹ ವ್ಯವಸ್ಥೆಗಳನ್ನು ದೊಡ್ಡ ಪ್ರಮಾಣದಲ್ಲಿ, ಏಕರೂಪದ ಗುಣಮಟ್ಟದಲ್ಲಿ ಮತ್ತು ಕೈಗೆಟುಕುವ ದರದಲ್ಲಿ ತಯಾರಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರ, ವಿಶೇಷ ರಾಸಾಯನಿಕಗಳು, ಔಷಧ ಮತ್ತು ಅರೆವಾಹಕಗಳ ತಯಾರಿಕೆಯಲ್ಲಿ ಹೈಡ್ರೋಜನ್ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅನೇಕ ಕೈಗಾರಿಕೆಗಳು ಸಿಲಿಂಡರ್ಗಳು ಮತ್ತು ವಿಶೇಷ ಸಾಗಣೆ ವಾಹನಗಳ ಮೂಲಕ ಹೈಡ್ರೋಜನ್ ಖರೀದಿಸುತ್ತಿವೆ. ಇದರಿಂದ ಹೈಡ್ರೋಜನ್ನ ಮೂಲ ಬೆಲೆಗಿಂತಲೂ ಅದರ ಸಂಕುಚನ, ಸಾಗಣೆ ಮತ್ತು ಸಂಗ್ರಹಣೆಗೆ ಹೆಚ್ಚಿನ ವೆಚ್ಚವಾಗುತ್ತಿದೆ. ಒಟ್ಟು ವೆಚ್ಚದ ಶೇ 70ರಿಂದ 85ರಷ್ಟು ಮೊತ್ತ ಈ ಪ್ರಕ್ರಿಯೆಗಳಿಗೆ ವ್ಯಯವಾಗುತ್ತಿದೆ ಎಂದು ತಿಳಿಸಿದರು.
ಹೈಡ್ರೋಜನ್ ಪೂರೈಕೆಯಲ್ಲಿ ವಿಳಂಬವಾದರೆ ಕಾರ್ಖಾನೆಗಳ ಉತ್ಪಾದನೆಯೇ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಹೈಡ್ರೋಜನ್ ಅಗತ್ಯವಿರುವ ಕಾರ್ಖಾನೆಗಳಲ್ಲೇ ಅದನ್ನು ಉತ್ಪಾದಿಸುವ ವ್ಯವಸ್ಥೆ ರೂಪಿಸುವ ಮೂಲಕ ವೆಚ್ಚ ಕಡಿಮೆ ಮಾಡಬಹುದು. ಈ ಉದ್ದೇಶದಿಂದ ಗಂಜಿಮಠದಲ್ಲಿ ಘಟಕ ಸ್ಥಾಪಿಸಲಾಗಿದ್ದು, ಇಲ್ಲಿಂದ ದೇಶದ ವಿವಿಧ ಭಾಗಗಳಲ್ಲಿರುವ ಹಾಗೂ ವಿದೇಶಗಳಲ್ಲಿರುವ ಕೈಗಾರಿಕೆಗಳಿಗೆ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಇದೇ 15 ರಂದು ನಡೆವ ಕಾರ್ಯಕ್ರಮದಲ್ಲಿ ಅತಿಥಿಗಳು ಘಟಕಕ್ಕೆ ಭೇಟಿ ನೀಡಿ, ವಿದ್ಯುದ್ವಿಚ್ಛೇದಕಗಳ ಜೋಡಣೆ, ವ್ಯವಸ್ಥೆಗಳ ಸಂಯೋಜನೆ, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆಗಳನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ 250 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಬಗೆಯ ಹೈಡ್ರೋಜನ್ ಉತ್ಪಾದನಾ ವ್ಯವಸ್ಥೆಗಳನ್ನು ಅನಾವರಣಗೊಳಿಸಲಾಗುವುದು. ಹೆಚ್ಚಿನ ಪ್ರಮಾಣದಲ್ಲಿ ಹೈಡ್ರೋಜನ್ ಅಗತ್ಯ ಇರುವ ಕೈಗಾರಿಕೆಗಳ ಬಳಕೆಗೆ ಇವುಗಳನ್ನು ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ ಮತ್ತು ಪರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪುಣೆ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ ನಿರ್ದೇಶಕ ಡಾ. ಆಶಿಷ್ ಲೇಲೆ ಪ್ರಧಾನ ಭಾಷಣ ಮಾಡಲಿದ್ದಾರೆ. ಹೈಡ್ರೋಜನ್ ತಂತ್ರಜ್ಞಾನವನ್ನು ಪ್ರಯೋಗಾಲಯದ ಹಂತದಿಂದ ವಾಣಿಜ್ಯ ಬಳಕೆಗೆ ವಿಸ್ತರಿಸುವುದು, ಪ್ರಾಯೋಗಿಕ ಘಟಕಗಳಿಂದ ಬಹು ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರಗಳವರೆಗೆ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಹೈಡ್ರೋಜನ್ ವೆಚ್ಚ ಕಡಿಮೆ ಮಾಡಲು ಅಗತ್ಯವಿರುವ ಹೂಡಿಕೆ ಕುರಿತು ತಜ್ಞರ ಉಪನ್ಯಾಸ ಮತ್ತು ಸಂವಾದ ನಡೆಯಲಿದೆ ಎಂದರು.
ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಪೊರೇಟ್ ನಿರ್ದೇಶಕಿ ರಮ್ಯಶ್ರೀ ಡಿ.ಎಸ್., ಮುಖ್ಯಸ್ಥ ಸಂಜಯ್ ನಾರಾಯಣನ್, ಮಾನವ ಸಂಪನ್ಮೂಲ ಮತ್ತು ಪರಿವರ್ತನೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಮೃತೇಶ್ ಶುಕ್ಲಾ, ಉತ್ಪಾದನಾ ವಿಭಾಗದ ಸಹ ಉಪಾಧ್ಯಕ್ಷ ವೆಂಕಟರಾಮ ಪಿ.ಕೆ. ಹಾಗೂ ಆಡಳಿತ ಮತ್ತು ಸೌಲಭ್ಯ ನಿರ್ವಹಣೆ ವಿಭಾಗದ ಉಪಾಧ್ಯಕ್ಷ ಚಂದ್ರಶೇಖರ ಐತಾಳ ಇದ್ದರು.


