ಅ.18 ರಂದು ಕುಡ್ಲದ ಪಿಲಿಪರ್ಬ: 11 ಹುಲಿವೇಷ ತಂಡಗಳ ಭಾಗಿ: ಶಾಸಕ ವೇದವ್ಯಾಸ್ ಕಾಮತ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕರಾವಳಿಯ ಜನಪ್ರಿಯ ಹುಲಿವೇಷ ಕಲೆಗೆ ವೈಭವದ ವೇದಿಕೆ ಕಲ್ಪಿಸುವ ‘ಕುಡ್ಲದ ಪಿಲಿಪರ್ಬ’ದ ಐದನೇ ಆವೃತ್ತಿ ಅಕ್ಟೋಬರ್ 18ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಸ್ಪರ್ಧಾಕೂಟದಲ್ಲಿ ಕರಾವಳಿ 11 ಪ್ರಮುಖ ಹುಲಿವೇಷ ತಂಡಗಳು ಭಾಗವಹಿಸಲಿವೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿವೆ. ಪ್ರತಿಯೊಂದು ತಂಡವೂ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಪ್ರವೇಶಿಸಿ 20 ನಿಮಿಷಗಳ ಕಾಲ ಪ್ರದರ್ಶನ ನೀಡಲಿದೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿ, ಮರಿಹುಲಿ, ಹಿಮ್ಮೇಳ ಹಾಗೂ ಧರಣಿ ಮಂಡಲ ಸೇರಿದಂತೆ ತುಳುನಾಡಿನ ಹುಲಿವೇಷ ಪರಂಪರೆಯ ವಿವಿಧ ಆಯಾಮಗಳು ಸ್ಪರ್ಧಾಕೂಟದಲ್ಲಿ ಅನಾವರಣಗೊಳ್ಳಲಿವೆ ಎಂದರು.

ವಿಡಿಯೊ ದಾಖಲೆ ಮೂಲಕ ತೀರ್ಪು

ಸ್ಪರ್ಧೆಯ ಪಾರದರ್ಶಕತೆ ಕಾಪಾಡಲು 6 ತೀರ್ಪುಗಾರರನ್ನು ನೇಮಿಸಲಾಗಿದೆ. ಇವರಲ್ಲಿ ನಾಲ್ವರು ವೇದಿಕೆಯಲ್ಲಿದ್ದು, ಇನ್ನಿಬ್ಬರು ಒಳಭಾಗದಲ್ಲಿ ವಿಡಿಯೋ ವೀಕ್ಷಿಸಿ ಮೂರನೇ ಅಂಪೈರ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತಂಡಗಳು ವೇದಿಕೆಗೆ ಆಗಮಿಸುವುದರಿಂದ ಹಿಡಿದು ಪ್ರದರ್ಶನ ಮುಗಿಸಿ ನಿರ್ಗಮಿಸುವವರೆಗಿನ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋದಲ್ಲಿ ದಾಖಲಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮರುವೀಕ್ಷಣೆ ನಡೆಸಿದ ಬಳಿಕವೇ ಫಲಿತಾಂಶ ಪ್ರಕಟಿಸಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರಲಿದೆ ಎಂದರು.

ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಇದರೊಂದಿಗೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ ಹಾಗೂ ಧರಣಿ ಮಂಡಲ ವಿಭಾಗಗಳಲ್ಲಿಯೂ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸುವ ಪ್ರತಿಯೊಂದು ಹುಲಿವೇಷ ತಂಡಕ್ಕೂ ಗೌರವಧನ ನೀಡಲಾಗುವುದು ಎಂದರು.

5 ಸಾವಿರ ಮಂದಿಗೆ ಪ್ರೇಕ್ಷಕ ಗ್ಯಾಲರಿ

ಸ್ಪರ್ಧಾಕೂಟ ವೀಕ್ಷಿಸಲು ಕೇಂದ್ರ ಮೈದಾನದಲ್ಲಿ ಸುಮಾರು 5 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಪ್ರೇಕ್ಷಕ ಗ್ಯಾಲರಿ ನಿರ್ಮಿಸಲಾಗಿದೆ. ಕಾರ್ಯಕ್ರಮದ ಪ್ರಮುಖ ಕ್ಷಣಗಳನ್ನು ವೀಕ್ಷಿಸಲು ದೊಡ್ಡ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಮೈದಾನಕ್ಕೆ ಬರಲು ಸಾಧ್ಯವಾಗದವರಿಗಾಗಿ ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಲು ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಗಣ್ಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಪಾರ್ಕಿಂಗ್ ಮತ್ತು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಆರಂಭವಾಗುವ ಸ್ಪರ್ಧಾಕೂಟ ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ 11 ತಂಡಗಳು

ಹನುಮಾನ್ ಟೈಗರ್ಸ್, ಉಪ್ಪಳ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್, ಕುಂಜತ್ತೂರು–ಮಂಜೇಶ್ವರ
ಕೊಡಿಯಾಲ್ ಬೈಲ್ ಫ್ರೆಂಡ್ಸ್ ಲೆಜೆಂಡ್ ಟೈಗರ್ಸ್, ಪೊಳಲಿ ದ ಕಿಂಗ್ ಟೈಗರ್ಸ್ ರಾಜ್ ಫ್ರೆಂಡ್ಸ್, ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ, ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು, ಫ್ರೆಂಡ್ಸ್ ಅಂಗಾರಗುಡ್ಡೆ ಟೈಗರ್ಸ್, ಮುಲ್ಕಿ, ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ, ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ನವನೀತ್ ಶೆಟ್ಟಿ ಕದ್ರಿ, ಕಿರಣ್ ಶೆಣೈ, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಹಾಗೂ ಚೇತನ್ ಕಾಮತ್ ಇದ್ದರು.

Leave a Reply

Your email address will not be published. Required fields are marked *