ಮ್ಯಾಂಡ್ ಸೊಭಾಣ್ ಗಿನ್ನೆಸ್ ದಾಖಲೆ ಸಂಭ್ರಮದಲ್ಲಿ ರೊನಾಲ್ಡ್ ಕೊಲಾಸೊ ಭಾಗಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕೊಂಕಣಿ ಸಂಗೀತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮ್ಯಾಂಡ್ ಸೊಭಾಣ್ ಸಂಸ್ಥೆಯ ಐತಿಹಾಸಿಕ ಗಿನ್ನೆಸ್ ವಿಶ್ವ ದಾಖಲೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 11 ದಿನ, 11 ಗಂಟೆ ಮತ್ತು 11 ನಿಮಿಷಗಳ ಕಾಲ ನಡೆದ ನಿರಂತರ ಮ್ಯಾರಥಾನ್ ಗಾಯನದ ಸಾಧನೆಯನ್ನು ನಗರದಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು. ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ ದಂಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮ್ಯಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ್ದ ಬಹು ಗಾಯಕರ ಮ್ಯಾರಥಾನ್ ಗಾಯನದಲ್ಲಿ ಸುಮಾರು 7 ಸಾವಿರ ಗಾಯಕರು ಭಾಗವಹಿಸಿದ್ದು, 5 ಸಾವಿರಕ್ಕೂ ಅಧಿಕ ಹಾಡುಗಳನ್ನು ಪ್ರಸ್ತುತಪಡಿಸಿದ್ದರು. ಈ ಮೂಲಕ ಸಂಸ್ಥೆ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿತ್ತು.

ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದ ಡಾ. ರೊನಾಲ್ಡ್ ಕೊಲಾಸೊ, ಮ್ಯಾಂಡ್ ಸೊಭಾಣ್ ತನ್ನ ವಿನೂತನ ಪ್ರಯತ್ನಗಳು ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ ಎಂದರು.

ಸಾವಿರಾರು ಗಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕೊಂಕಣಿ ಸಂಗೀತದ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿರುವುದು ಹೆಮ್ಮೆಯ ಸಂಗತಿ. ಸಂಸ್ಥೆಯ ಅಧ್ಯಕ್ಷ ಲುವಿ ಜೆ. ಪಿಂಟೊ ಹಾಗೂ ಇಡೀ ತಂಡದ ದೂರದೃಷ್ಟಿ, ಯೋಜನೆ ಮತ್ತು ಪರಿಶ್ರಮ ಈ ಸಾಧನೆಗೆ ಕಾರಣವಾಗಿದೆ. ತಂಡದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ರೊನಾಲ್ಡ್ ಕೊಲಾಸೊ ಅವರ ಪತ್ನಿ ಜೇನ್ ಕೊಲಾಸೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ರಾಯ್ ಕ್ಯಾಸ್ಟೆಲಿನೊ, ಮ್ಯಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಸೇರಿದಂತೆ ಕೊಂಕಣಿ ಕ್ಷೇತ್ರದ ಗಣ್ಯರು ಇದ್ದರು.

ವಿನ್ಸೆಂಟ್ ಫೆರ್ನಾಂಡಿಸ್ ಕಾಸಿಯಾ ಮತ್ತು ಅವರ ಮೊಗಾಚಿ ಲಹರಾಂ ತಂಡದವರು ಬ್ರಾಸ್ ಬ್ಯಾಂಡ್ ಸಂಗೀತದ ಮೂಲಕ ಸಂಭ್ರಮಾಚರಣೆಗೆ ಮೆರುಗು ನೀಡಿದರು. ಗಣ್ಯರು ಮ್ಯಾಂಡ್ ಸೊಭಾಣ್ ತಂಡದ ಸಾಂಸ್ಕೃತಿಕ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

Leave a Reply

Your email address will not be published. Required fields are marked *