ಉಡುಪಿ: ಭೂಗತ ಜಗತ್ತಿನ ಕುಖ್ಯಾತ ಪಾತಕಿ ರವಿ ಪೂಜಾರಿ ಅವರು ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಶನಿವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಪೆಯ ನೆರ್ಗಿಗೆ ಬಂದರು. ನ್ಯಾಯಾಲಯದ ವಿಶೇಷ ಅನುಮತಿ ಮೇರೆಗೆ ಬೆಂಗಳೂರಿನ ಜೈಲಿನಿಂದ ಕರೆತರಲಾಗಿದ್ದ ಅವರು, ತಾಯಿಯ ಪಾರ್ಥಿವ ಶರೀರದ ಮುಂದೆ ಕಣ್ಣೀರಿಟ್ಟರು.
ರವಿ ಪೂಜಾರಿ ಅವರ ತಾಯಿ ಸುಶೀಲಾ ಪೂಜಾರ್ತಿ (86) ಅವರು ನ.12 ರಂದು ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದರು. ಮೃತರು ಐದು ಮಂದಿ ಮಕ್ಕಳನ್ನು ಅಗಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಹಾಗೂ ರವಿ ಪೂಜಾರಿ ಸೇರಿದಂತೆ ಮೂರು ಮಂದಿ ಪುತ್ರರು ಇದ್ದಾರೆ.
ತಾಯಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ರವಿ ಪೂಜಾರಿ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡಿ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ಶನಿವಾರ ಬೆಂಗಳೂರಿನ ಜೈಲಿನಿಂದ ರವಿ ಪೂಜಾರಿ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಮಲ್ಪೆಯ ನೆರ್ಗಿಗೆ ಕರೆತಂದರು. ಮನೆಗೆ ಆಗಮಿಸಿದ ಅವರು ತಾಯಿಯ ಪಾರ್ಥಿವ ಶರೀರದ ದರ್ಶನ ಪಡೆದು ಭಾವುಕರಾದರು. ಬಳಿಕ ಮಲ್ಪೆಯ ರುದ್ರಭೂಮಿಯಲ್ಲಿ ನಡೆದ ಅಂತ್ಯಕ್ರಿಯೆ ಹಾಗೂ ಧಾರ್ಮಿಕ ವಿಧಿಳಲ್ಲಿ ಪಾಲ್ಗೊಂಡರು.
ಅಂತ್ಯಕ್ರಿಯೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆ ವೇಳೆಗೆ ಅವರನ್ನು ಮತ್ತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಜೈಲಿಗೆ ಕರೆದೊಯ್ಯಲಾಯಿತು.
ರವಿ ಪೂಜಾರಿ ಅವರ ಆಗಮನ ಮತ್ತು ವಾಪಸಾತಿ ಸಂದರ್ಭದಲ್ಲಿ ಬಂಧೀಖಾನೆ ಇಲಾಖೆ ವತಿಯಿಂದ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಉಡುಪಿ ಜಿಲ್ಲಾ ಪೊಲೀಸರೂ ಸ್ಥಳೀಯವಾಗಿ ಹೆಚ್ಚುವರಿ ಭದ್ರತೆ ಒದಗಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.





