ಮಂಗಳೂರು: ಭಾರತದ ಬೆಳವಣಿಗೆಯಲ್ಲಿ ಯುವ ಪದವೀಧರರ ಶಕ್ತಿ ಮತ್ತು ಉತ್ಸಾಹ ನಿರ್ಣಾಯಕ ಪಾತ್ರ ವಹಿಸಲಿದ್ದು, ತಂತ್ರಜ್ಞಾನದ ಜತೆಗೆ ನೈತಿಕತೆ, ತೀರ್ಮಾನಶಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಎನ್ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎಂ. ಮುರುಗಪ್ಪನ್ ಕರೆ ನೀಡಿದರು.
ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದ (ಎನ್ಐಟಿಕೆ) 24 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶನಿವಾರ ಅವರು ಮಾತನಾಡಿದರು.
ಭಾರತೀಯ ರಾಷ್ಟ್ರೀಯ ಎಂಜಿನಿಯರಿಂಗ್ ಅಕಾಡೆಮಿ ಅಧ್ಯಕ್ಷ ಹಾಗೂ ಇನ್-ಸ್ಪೇಸ್ ಮಂಡಳಿ ಸದಸ್ಯ ಜೆ.ಡಿ. ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಿಂದ ವೃತ್ತಿಜೀವನಕ್ಕೆ ಪ್ರವೇಶಿಸುವುದು ಹೊಸ ಹಂತದ ಆರಂಭ. ನೈಜ ಬದುಕಿನ ಸಮಸ್ಯೆಗಳಿಗೆ ಸಿದ್ಧ ಉತ್ತರಗಳಿರುವುದಿಲ್ಲ. ವಿವಿಧ ಕ್ಷೇತ್ರಗಳ ಜ್ಞಾನವನ್ನು ಸಮನ್ವಯಗೊಳಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಘಟಿಕೋತ್ಸವದಲ್ಲಿ ಒಟ್ಟು 1,986 ಪದವಿಗಳನ್ನು ಪ್ರದಾನ ಮಾಡಲಾಯಿತು. ಅವುಗಳಲ್ಲಿ 967 ಬಿ.ಟೆಕ್., 680 ಎಂ.ಟೆಕ್., 12 ಎಂ.ಟೆಕ್. ಸಂಶೋಧನೆ, 66 ಎಂಸಿಎ, 74 ಎಂಬಿಎ, 68 ಎಂ.ಎಸ್ಸಿ. ಹಾಗೂ 119 ಪಿಎಚ್.ಡಿ. ಪದವಿಗಳು ಸೇರಿವೆ. ಶೈಕ್ಷಣಿಕ ಸಾಧನೆಗಾಗಿ 11 ಪದವಿ ಹಾಗೂ 35 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 46 ಮಂದಿಗೆ ಚಿನ್ನದ ಪದಕ ಮತ್ತು ಪ್ರಾಯೋಜಿತ ಪದಕಗಳನ್ನು ಪ್ರದಾನ ಮಾಡಲಾಯಿತು.
ಸಂಸ್ಥೆಯ ನಿರ್ದೇಶಕ ಪ್ರೊ. ಬಿ. ರವಿ ವಾರ್ಷಿಕ ವರದಿ ಮಂಡಿಸಿ, ಹೊಸ ಪಠ್ಯಕ್ರಮ, ಸಂಶೋಧನೆ, ನವೋದ್ಯಮಗಳ ಸಾಧನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮಾಹಿತಿ ನೀಡಿದರು. 2026-30ನೇ ಸಾಲಿನ ಬಿ.ಟೆಕ್. ವಿದ್ಯಾರ್ಥಿಗಳಿಗಾಗಿ ಮರು ವಿನ್ಯಾಸಗೊಳಿಸಿದ ಪಠ್ಯಕ್ರಮ ಮತ್ತು 3 ಕೋಟಿ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹ ವ್ಯವಸ್ಥೆ ಸಂಸ್ಥೆಯ ಪ್ರಮುಖ ಸಾಧನೆಗಳಾಗಿವೆ ಎಂದು ತಿಳಿಸಿದರು.
ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ, ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಅಧಿವೇಶನಗಳಲ್ಲಿ ಪದವಿ ಪ್ರದಾನ ನಡೆಯಿತು. ಉಪನಿರ್ದೇಶಕ ಪ್ರೊ. ಸುಭಾಷ್ ಸಿ. ಯಾರಗಲ್ ಇದ್ದರು. ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧ್ಯಾಪಕರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.





