ಮಂಗಳೂರು: ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆಯ ಮೂಲಕ ಸಾವಿರಾರು ಜನರ ಬದುಕಿನಲ್ಲಿ ಬದಲಾವಣೆ ತಂದಿರುವ ಡಾ. ಎಂ. ಮೋಹನ ಆಳ್ವರ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ಸೇವಾ ಕಾರ್ಯಗಳ ಮೂಲಕ ಆಚರಿಸಲು ಸಿದ್ಧತೆ ನಡೆದಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
15 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆಸಲಾಗಿದೆ. ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್ ಹಾಗೂ ವೃದ್ಧರ ಘನತೆಯ ಬದುಕಿಗೆ ನೆರವಾಗುವ ‘ಹ್ಯಾಪಿ ಡೆತ್’ ಯೋಜನೆ ರೂಪಿಸುವ ಆಶಯ ಹೊಂದಲಾಗಿದೆ ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಮಾತನಾಡಿ, ಡಾ. ಮೋಹನ ಆಳ್ವರ ಕನಸುಗಳು ವಿಶಾಲವಾಗಿದ್ದು, ಅವುಗಳಿಗೆ ಎಲ್ಲರೂ ಒಗ್ಗೂಡಿ ಜೀವ ತುಂಬಬೇಕು. ಅಮೃತ ಮಹೋತ್ಸವವು ಕೇವಲ ಸಮಾರಂಭಕ್ಕೆ ಸೀಮಿತವಾಗದೆ ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯವಾಗಿ ಹೊರಹೊಮ್ಮಲಿದೆ. ಈ ಸಾರ್ಥಕ ಕಾರ್ಯದಲ್ಲಿ ಪೇಜಾವರ ಮಠವೂ ಭಾಗಿಯಾಗುತ್ತಿರುವುದು ಸಂತಸದ ಸಂಗತಿ. ಒಂದು ಲಕ್ಷ ರೂ. ದೇಣಿಗೆಯನ್ನು ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಕರಾವಳಿಯ ಹೆಮ್ಮೆಯ ಸಾಧಕರಾದ ಮೋಹನ ಆಳ್ವರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವುದು ಸೌಭಾಗ್ಯ ಎಂದರು.
ಮಾಜಿ ಸಚಿವ ರಮಾನಾಥ ರೈ ಅವರು ಮಾತನಾಡಿ, ಮೂಡುಬಿದಿರೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸುವಲ್ಲಿ ಮೋಹನ ಆಳ್ವರ ಕೊಡುಗೆ ಮಹತ್ವದ್ದಾಗಿದೆ. ಅವರ ಸಮಾಜಮುಖಿ ಬದುಕು ಮತ್ತು ನಿರಂತರ ಕ್ರಿಯಾಶೀಲತೆ ಎಲ್ಲರಿಗೂ ಮಾದರಿ ಎಂದರು.
ಚಂದ್ರಹಾಸ ಶೆಟ್ಟಿ ಮಾತನಾಡಿ, ಮೋಹನ ಆಳ್ವರ ಸರಳ ವ್ಯಕ್ತಿತ್ವ ಮತ್ತು ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ ಅಮೃತ ಮಹೋತ್ಸವ ಆಯೋಜಿಸಲಾಗುತ್ತಿದೆ. ದುಂದು ವೆಚ್ಚಕ್ಕೆ ಅವಕಾಶ ನೀಡದೆ, ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಬೇಕು. ಅಭಿಮಾನಿಗಳು ಮತ್ತು ಹಿತೈಷಿಗಳು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೃಷ್ಣ ಜೆ. ಪಾಲೇಮಾರ್, ಬಿ. ನಾಗರಾಜ ಶೆಟ್ಟಿ, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಎಂ.ಬಿ. ಪುರಾಣಿಕ್, ಶ್ರೀಪತಿ ಭಟ್, ಮೀನಾಕ್ಷಿ ಆಳ್ವ,ಮಂಗಳೂರು ಮೂಡಾ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಇದ್ದರು.
ಫೆ. 13ರಂದು ಅಮೃತ ಮಹೋತ್ಸವ
2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಅಮೃತ ಮಹೋತ್ಸವ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಶಶಿಧರ ಶೆಟ್ಟಿ ಬರೋಡ ಮತ್ತು ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿಯಾಗಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಆಯ್ಕೆಯಾದರು.





