ವೀರರಾಣಿಯ ನೆಲದಲ್ಲಿ ಸಾಂಸ್ಕೃತಿಕ ವೈಭವ: ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ

ಅಂತರ ಜಿಲ್ಲೆ ರಾಜ್ಯ

Spread the love

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ ವಿಜಯದ ಸ್ಮರಣಾರ್ಥ ಆಯೋಜಿಸಿರುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಐತಿಹಾಸಿಕ ಕಿತ್ತೂರು ಕೋಟೆಯ ಆವರಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ವೀರರಾಣಿಯ ಸಾಹಸ, ನಾಡಿನ ಪರಂಪರೆ ಹಾಗೂ ಜನಪದ ಕಲಾವೈಭವ ಅನಾವರಣಗೊಂಡಿತು.

ರಾಜ್ಯದಾದ್ಯಂತ ಸಂಚರಿಸಿ ಜನಮನ ಸೆಳೆದ ವಿಜಯಜ್ಯೋತಿಯನ್ನು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡರು. ಬಳಿಕ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದ ಜಾನಪದ ಕಲಾವಾಹಿನಿಗೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು. ಡೊಳ್ಳುಕುಣಿತ, ಪುರವಂತಿಕೆ, ಜಗ್ಗಲಗಿ, ಕರಡಿ ಮಜಲು, ಸಂಬಳ, ಹಲಗೆ ವಾದನ, ಹೆಜ್ಜೆ ಮೇಳ, ತಮಟೆ, ಗೊಂಬೆ ಕುಣಿತ, ಬುಜಂಗ ಯಕ್ಷಗಾನ, ನಂದಿಧ್ವಜ, ಕಂಸಾಳೆ, ಚಂಡೆ ವಾದನ, ಕರ್ಬಲ ಕುಣಿತ, ನಾಸಿಕ ಡೋಲು, ದಟ್ಟಿ ಕುಣಿತ ಹಾಗೂ ಕಣಿ ವಾದನ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಸಾಂಸ್ಕೃತಿಕ ಸೊಬಗು ಹೆಚ್ಚಿಸಿದವು.

ವಿವಿಧ ಇಲಾಖೆಗಳ ಸರ್ಕಾರಿ ಯೋಜನೆಗಳು ಹಾಗೂ ಜನಪರ ಸೌಲಭ್ಯಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳೂ ಮೆರವಣಿಗೆಯಲ್ಲಿ ಗಮನ ಸೆಳೆದವು. ಕಲಾತಂಡಗಳ ಪ್ರದರ್ಶನವನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.

ಕಿತ್ತೂರು ಕೋಟೆ ಆವರಣದಲ್ಲಿ ಆಯೋಜಿಸಿರುವ ಬೃಹತ್ ವಸ್ತುಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನವನ್ನು ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ಕೃಷಿ, ಆರೋಗ್ಯ ಮತ್ತು ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ನೂರಕ್ಕೂ ಅಧಿಕ ಮಳಿಗೆಗಳು ಪ್ರದರ್ಶನದಲ್ಲಿವೆ. ಇದರ ಜತೆಗೆ ವೈವಿಧ್ಯಮಯ ಆಹಾರಗಳನ್ನು ಪರಿಚಯಿಸುವ 37 ಆಹಾರ ಮಳಿಗೆಗಳೂ ಜನರನ್ನು ಆಕರ್ಷಿಸುತ್ತಿವೆ.

ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಮಂದಿ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಐತಿಹಾಸಿಕ ಕೋಟೆಯ ಪರಿಸರದಲ್ಲಿ ಕಲೆ, ಸಂಸ್ಕೃತಿ, ಜನಪದ ಪರಂಪರೆ ಹಾಗೂ ಜನಜೀವನದ ವೈವಿಧ್ಯ ಒಂದೆಡೆ ಮೇಳೈಸಿತು.

ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟ ಮತ್ತು ಶೌರ್ಯದ ನೆನಪನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ನಡೆಯುತ್ತಿರುವ ಉತ್ಸವವು ಮೊದಲ ದಿನವೇ ಉತ್ಸಾಹದ ವಾತಾವರಣ ಸೃಷ್ಟಿಸಿದೆ. ಮುಂದಿನ ಎರಡು ದಿನಗಳಲ್ಲೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಿತ್ತೂರು ಉತ್ಸವದ ಸಂಭ್ರಮ ಮುಂದುವರೆಯಲಿದೆ.

Leave a Reply

Your email address will not be published. Required fields are marked *