ಕಾರವಾರ: ಜಿಲ್ಲೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕರಿಸಲಾದ 1,641 ಅರ್ಜಿಗಳ ಪೈಕಿ 1,163 ಅರ್ಜಿಗಳನ್ನು ಇದುವರೆಗೆ ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ 478 ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಇನ್ನೆರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಜಿದಾರರಿಗೆ ಹಿಂಬರಹ ಕಡ್ಡಾಯ: ಸಾರ್ವಜನಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅರ್ಜಿಯ ಮೇಲೂ ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ತಪ್ಪದೇ ಹಿಂಬರಹ ನೀಡಬೇಕು. ಅರ್ಜಿಯ ಆಧಾರದ ಮೇಲೆ ಯಾವುದೇ ಸೌಲಭ್ಯ ಕಲ್ಪಿಸಿದ್ದರೆ, ಮುಂದಿನ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸುವಂತೆ ಅವರು ಸೂಚಿಸಿದರು.
ಅರ್ಜಿಗಳನ್ನು ಕೇವಲ ವಿಲೇವಾರಿ ಮಾಡಿದಂತೆ ದಾಖಲಿಸುವ ಬದಲು, ಅವುಗಳ ಕುರಿತು ಸೂಕ್ತ ಕ್ರಮ ಕೈಗೊಂಡ ಬಳಿಕವೇ ಅರ್ಜಿದಾರರಿಗೆ ಹಿಂಬರಹ ನೀಡಬೇಕು. ಕಾಮಗಾರಿಗೆ ಕೇಂದ್ರ ಕಚೇರಿಯಿಂದ ಹೆಚ್ಚಿನ ಅನುದಾನ ಕೋರಿದ್ದರೆ, ಪ್ರಸ್ತಾವನೆ ಸಲ್ಲಿಸಿದ್ದರೆ ಅಥವಾ ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿದ್ದರೆ, ಅದರ ದಾಖಲೆಯನ್ನೂ ಅರ್ಜಿದಾರರಿಗೆ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಆಧಾರ್, ಇ-ಕೆವೈಸಿ ಕೇಂದ್ರ: ಮುಂದಿನ ಪ್ರಜಾಸೇವೆ ಆಂದೋಲನ ನಡೆಯುವ ಸ್ಥಳದಲ್ಲೇ ಆಧಾರ್ ನೋಂದಣಿ ಕೇಂದ್ರ ಹಾಗೂ ಆಹಾರ ಇಲಾಖೆಯ ಇ-ಕೆವೈಸಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೆಪ್ಟೆಂಬರ್ 19 ರಂದು ಕುಮಟಾ ತಾಲ್ಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದೆ. ಸಭೆಗೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕುಮಟಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad




