ಸಾನಿಧ್ಯ ವಸತಿಯುತ ಶಾಲೆಯಲ್ಲಿ ವಿಶೇಷ ಮಕ್ಕಳ ಕ್ರೀಡಾಪ್ರತಿಭೆಗೆ ವೇದಿಕೆ; ವಾರ್ಷಿಕ ಕ್ರೀಡಾಕೂಟದಲ್ಲಿ ಮಕ್ಕಳ ಕಲರವ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಲ್ಲಿರುವ ಕ್ರೀಡಾಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ‘ವಾರ್ಷಿಕ ಕ್ರೀಡಾಕೂಟ–2026’ ಶನಿವಾರ ನಡೆಯಿತು.

ವಿಶೇಷ ಮಕ್ಕಳಿಗೆ ವಸತಿ ಸೌಲಭ್ಯದೊಂದಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಸಾನಿಧ್ಯ ಶಾಲೆಯು 24 ವರ್ಷಗಳ ಸೇವಾ ಪಯಣವನ್ನು ಪೂರ್ಣಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಶಾಲೆಯ ಸುಮಾರು 210 ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಸಹಾಯಕ ಪೊಲೀಸ್ ಆಯುಕ್ತ ವಿಜಯಕ್ರಾಂತಿ ಉದ್ಘಾಟಿಸಿದರು. ವಾಮಂಜೂರು ಪೊಲೀಸ್ ಠಾಣೆಯ ಅಧಿಕಾರಿ ಅರುಣ್ ಕುಮಾರ್, ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಅಧ್ಯಕ್ಷ ಮಾಹಾಬಲ ಮಾರ್ಲ, ಖಜಾಂಚಿ ಜಗದೀಶ್ ಶೆಟ್ಟಿ ಸೇರಿದಂತೆ ಗಣೇಶ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಇದ್ದರು.

ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಡಿಮೆ ಸಾಮರ್ಥ್ಯದ ಮಕ್ಕಳಿಗೆ 50 ಮೀಟರ್ ನಡಿಗೆ, 50 ಮೀಟರ್ ಓಟ ಹಾಗೂ ಚೆಂಡು ಎಸೆತ ಸ್ಪರ್ಧೆಗಳು ನಡೆದವು. ಹೆಚ್ಚು ಸಾಮರ್ಥ್ಯದ ಮಕ್ಕಳ ವಿಭಾಗದಲ್ಲಿ 100 ಮೀಟರ್ ಓಟ ಮತ್ತು ಗುಂಡು ಎಸೆತ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ವಿತರಿಸಲಾಯಿತು.

ನಿರಂತರ ಪ್ರಯತ್ನದಿಂದ ಗುರಿ ಸಾಧನೆ

ಸಮಾರೋಪ ಸಮಾರಂಭದಲ್ಲಿ ಮಾನಸಿಕ ಆರೋಗ್ಯ ತಜ್ಞೆ ಹಾಗೂ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ರಮೀಳಾ ಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಎಲ್ಲ ಮಕ್ಕಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಸಂಭ್ರಮದ ಸಂಗತಿ. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಯಾವುದೇ ಗುರಿಯನ್ನು ತಲುಪಲು ಸಾಧ್ಯ ಎಂದು ಅವರು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಎಲ್ಲ ಕ್ರೀಡಾಪಟುಗಳಿಗೂ ಶುಭ ಹಾರೈಸಿದರು.

ಹಿರಿಯ ಶಿಕ್ಷಕಿ ಹಾಗೂ ಸಮಾಜ ಸೇವಕಿ ಮಂಗಳಾ ಸತೀಶ್ ನಂಬಿಯಾರ್ ಮತ್ತು ಸಮಾಜ ಸೇವಕಿ ದಿವ್ಯಾ ಪ್ರಕಾಶ್ ಮಲ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪಥಸಂಚಲನ ಸ್ಪರ್ಧೆಯಲ್ಲಿ ಕೆಂಪು ತಂಡ ಪ್ರಥಮ ಹಾಗೂ ಗಾಢ ನೀಲಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಕ್ರೀಡಾಕೂಟದ ಸಮಗ್ರ ಚಾಂಪಿಯನ್‌ಶಿಪ್ ಅನ್ನು ಗಾಢ ನೀಲಿ ತಂಡ ತನ್ನದಾಗಿಸಿಕೊಂಡರೆ, ಗುಲಾಬಿ ತಂಡ ದ್ವಿತೀಯ ಸ್ಥಾನ ಗಳಿಸಿತು.

ವಿಶೇಷ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಕ್ರೀಡಾಸ್ಫೂರ್ತಿ ಬೆಳೆಸುವ ನಿಟ್ಟಿನಲ್ಲಿ ಕ್ರೀಡಾಕೂಟ ಮಹತ್ವದ ಪಾತ್ರ ವಹಿಸಿತು.

Leave a Reply

Your email address will not be published. Required fields are marked *