ಮಂಗಳೂರು: ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳಿಂದ ಸಂಕಷ್ಟ ಎದುರಿಸುತ್ತಿರುವ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಓಸಿಎಲ್) ಕಾರ್ಖಾನೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕಾರ್ಖಾನೆಯ ಸಮಸ್ಯೆಗಳಿಗೆ ಸಂಕ್ರಾಂತಿ ಹಬ್ಬದ ವೇಳೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಶನಿವಾರ ಸಂಜೆ ಪಣಂಬೂರಿನಲ್ಲಿರುವ ಕೆಐಓಸಿಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾರ್ಖಾನೆಯ ಸಮಸ್ಯೆಗಳನ್ನು ಬಗೆಹರಿಸಲು ಸಂಕ್ರಾಂತಿಯವರೆಗೆ ಕಾಲಾವಕಾಶ ನೀಡುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದರು. ಅಷ್ಟರೊಳಗೆ ಸಂಸ್ಥೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಹಲವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಉಕ್ಕು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಹಿ ಹಾಕಿದ ಮೊದಲ ಕಡತವೇ ಕೆಐಓಸಿಎಲ್ಗೆ ಸಂಬಂಧಿಸಿದ್ದು. ಬಳ್ಳಾರಿಯ ದೇವದಾರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಹಣಕಾಸು ಖಾತರಿಯ ಪ್ರಮುಖ ಕಡತಕ್ಕೆ ಸಹಿ ಹಾಕಿ ಹಣಕಾಸು ಇಲಾಖೆಗೆ ಕಳುಹಿಸಿದ್ದೆ. ಆದರೆ, ದೇವದಾರಿ ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ಕೆಲವರು ಅಪಪ್ರಚಾರ ನಡೆಸಿದ್ದರಿಂದ ಸಂಸ್ಥೆಯ ಭವಿಷ್ಯ ಹಾಗೂ ಕಾರ್ಮಿಕರ ಬದುಕಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ದೇವದಾರಿಯಲ್ಲಿ ಗಣಿಗಾರಿಕೆ ಆರಂಭಿಸಿ ಸಂಸ್ಥೆಯನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಪ್ರಗತಿಗಳನ್ನು ಸಾಧಿಸಲಾಗಿದೆ. ಸಮುದ್ರ ತೀರದಲ್ಲಿರುವ ಇಂತಹ ಮಹತ್ವದ ಕೈಗಾರಿಕಾ ಸಂಸ್ಥೆಯನ್ನು ಉಳಿಸುವುದು ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರದ ಜವಾಬ್ದಾರಿಯೂ ಆಗಿದೆ. ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆಯುವ ನಿರೀಕ್ಷೆಯಿದೆ ಎಂದರು.

ಒಂದು ಕಾಲದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. 2022ರವರೆಗೂ ಕಾರ್ಖಾನೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮತ್ತೆ ಹಿಂದಿನಂತೆ ಲಾಭದ ಹಾದಿಗೆ ತರುವ ಪ್ರಯತ್ನ ನಡೆಯಲಿದೆ. 2030ರ ವೇಳೆಗೆ ದೇಶದಲ್ಲಿ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಅದರ ಭಾಗವಾಗಿ ಕೆಐಓಸಿಎಲ್ಗೂ ಪುನಶ್ಚೇತನ ನೀಡಲಾಗುವುದು ಎಂದು ಹೇಳಿದರು.
ಕಾರ್ಖಾನೆ ಒಂದು ಹಂತದಲ್ಲಿ ಮುಚ್ಚುವ ಭೀತಿಯನ್ನೂ ಎದುರಿಸಿತ್ತು. ಆದರೂ ಅದನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಲಾಗುತ್ತಿದೆ. ಕಾರ್ಮಿಕರ ಸಹಕಾರ ಮತ್ತು ಪರಿಶ್ರಮದಿಂದ ಮಾತ್ರ ಸಂಸ್ಥೆಯನ್ನು ಉಳಿಸಲು ಸಾಧ್ಯ. ಕಾರ್ಮಿಕರ ಬೆನ್ನಿಗೆ ನಿಂತು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ಕೆಐಓಸಿಎಲ್ ಆಡಳಿತ ಮಂಡಳಿಯೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಸಚಿವರು, ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಕಿರಣ್ ಅವರಿಂದ ಕಾರ್ಖಾನೆಯ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಮತ್ತಿತರರು ಇದ್ದರು.


