ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಇದುವರೆಗೆ 11,18,862 ಎನ್ಯುಮರೇಷನ್ ಫಾರ್ಮ್‌ಗಳ ಗಣಕೀಕರಣ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರು ಇದ್ದು, ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯವೂ ಬಹುತೇಕ ಪೂರ್ಣಗೊಂಡಿದ್ದು, ದಾಖಲೆಗಳ ಪರಿಶೀಲನೆ ಮತ್ತು ಗಣಕೀಕರಣ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ಮನೆ ಮನೆ ಸಮೀಕ್ಷೆ ವೇಳೆ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಮತದಾರರ ಪ್ರಕರಣಗಳು ಸೇರಿ ಒಟ್ಟು 99,185 ದಾಖಲೆಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಅವುಗಳಲ್ಲಿ 40,335 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 42,916 ಮಂದಿ ಮೃತಪಟ್ಟಿರುವುದು ಹಾಗೂ 11,586 ದ್ವಿಪ್ರತಿ ಮತದಾರರ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಗುರುತಿಸಲಾದ ಮಾಹಿತಿಯ ಪರಿಶೀಲನೆ ಬಳಿಕ ಚುನಾವಣಾ ಆಯೋಗದ ನಿಯಮಾನುಸಾರ ಮತದಾರರ ಪಟ್ಟಿಯಲ್ಲಿ ಅಗತ್ಯ ತಿದ್ದುಪಡಿ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಸಲು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಮಹತ್ವದ್ದಾಗಿದ್ದು, ಸಾರ್ವಜನಿಕರು ತಮ್ಮ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
What do you feel about this post?
Like
Love
Happy
Haha
Sad





