ಜನರ ಬಳಿಗೇ ಆಡಳಿತ, 15 ದಿನದಲ್ಲಿ ಸಮಸ್ಯೆ ಪರಿಹರಿಸಲು ಸಚಿವ ಲಕ್ಷ್ಮಣ ಸವದಿ ಸೂಚನೆ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕುಮಟಾ: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ‘ಪ್ರಜಾಸೇವಾ’ ಆಂದೋಲನಕ್ಕೆ ಮತ್ತಷ್ಟು ವೇಗ ನೀಡಿರುವ ಸರ್ಕಾರ, ಸ್ವೀಕರಿಸಿದ ಅರ್ಜಿಗಳನ್ನು ಗರಿಷ್ಠ 15 ದಿನಗಳೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

<

ಕುಮಟಾ ತಾಲ್ಲೂಕಿನ ದೀವಗಿಯ ಹಾಲಕ್ಕಿ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ,‘ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಯಾವುದೇ ವಿಳಂಬ ಸಹಿಸುವುದಿಲ್ಲ’ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸೇವಕರು ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ಜಿಲ್ಲೆಯ ಹೋಬಳಿ ಮಟ್ಟಕ್ಕೆ ಸಚಿವರು ಹಾಗೂ ಉನ್ನತಾಧಿಕಾರಿಗಳು ತೆರಳಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳು ಹಾಗೂ ಕುಂದುಕೊರತೆಗಳನ್ನು 15 ದಿನಗಳೊಳಗೆ ಪರಿಹರಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಪರಿಹರಿಸಲು ಸಾಧ್ಯವಾಗದ ಅರ್ಜಿಗಳಿಗೆ ಸೂಕ್ತ ಕಾರಣವನ್ನು ತಿಳಿಸಿ ಹಿಂಬರಹ ನೀಡಬೇಕು. ಯಾವುದೇ ನೆಪ ಹೇಳಿ ಅರ್ಜಿಗಳನ್ನು ಬಾಕಿ ಉಳಿಸಿಕೊಂಡು ಕಾಲಹರಣ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಪ್ರಗತಿಯನ್ನು ಜಿಲ್ಲಾ ಮಟ್ಟದ ಸಭೆಗಳಲ್ಲಿ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಯಲ್ಲಿ ಖುದ್ದಾಗಿ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಅಧಿಕಾರಿಗಳ ಜವಾಬ್ದಾರಿ

ಉತ್ತರ ಕನ್ನಡ ಜಿಲ್ಲೆಯ ಜನರು ಜಾಗೃತರಾಗಿದ್ದು, ತಮ್ಮ ಹಕ್ಕೊತ್ತಾಯಗಳನ್ನು ಗೌರವಯುತವಾಗಿ ಮಂಡಿಸುತ್ತಾರೆ. ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಶಾಸಕರಿಂದ ಹಲವು ಬೇಡಿಕೆ

ಕುಮಟಾ ಶಾಸಕ ದಿನಕರ ಕೆ. ಶೆಟ್ಟಿ ಮಾತನಾಡಿ, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಈಗಾಗಲೇ ಎರಡು ಆಂದೋಲನಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ದೊರೆಯದೆ ಮನೆ ನಿರ್ಮಿಸಿಕೊಳ್ಳಲು ತೊಂದರೆಯಾಗುತ್ತಿದೆ. ಜಿಪಿಎಸ್ ಸರ್ವೆ ನಡೆದಿದ್ದರೂ ಮನೆ ಅಥವಾ ಕೊಟ್ಟಿಗೆ ನಿರ್ಮಿಸಲು ಸಾಧ್ಯವಾಗದ ಕುಟುಂಬಗಳ ಸಮಸ್ಯೆ ಪರಿಹರಿಸಲು ಸಚಿವ ಸಂಪುಟದಲ್ಲಿ ಚರ್ಚಿಸಿ, 3ರಿಂದ 5 ಗುಂಟೆ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಕುಮಟಾ, ಭಟ್ಕಳ, ಹೊನ್ನಾವರ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕುಗಳಿಗೆ ಅನುಕೂಲವಾಗುವಂತೆ ಪ್ರತ್ಯೇಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪವಿಭಾಗ ಸ್ಥಾಪಿಸಬೇಕು. ಪ್ರಸ್ತುತ ಶಿರಸಿಯಲ್ಲಿ ವಿಭಾಗ ಕಚೇರಿ ಇರುವುದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ. ಪ್ರತ್ಯೇಕ ಉಪವಿಭಾಗ ಸ್ಥಾಪನೆಯಿಂದ ಕಳೆದ ಎರಡು ವರ್ಷಗಳಿಂದ ಎದುರಾಗುತ್ತಿರುವ ಬಸ್ ಕೊರತೆ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಇದೇ ವೇಳೆ ಕಿರಿದಾಗಿರುವ ಗೋಕರ್ಣ ರಸ್ತೆಯನ್ನು ಅಗಲೀಕರಣಗೊಳಿಸುವಂತೆಯೂ ಶಾಸಕ ದಿನಕರ ಕೆ. ಶೆಟ್ಟಿ ಮನವಿ ಮಾಡಿದರು.

412 ಅರ್ಜಿಗಳ ಸ್ವೀಕಾರ

ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 412 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳು ಮತ್ತು ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೀಮಿತ ಅವಧಿಯಲ್ಲಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಸುವಂತೆಯೂ ತಿಳಿಸಿದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಸಿ.ಕೆ., ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಣು ಗುಪ್ತ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಗೌಡ, ಮಾಜಿ ಶಾಸಕಿ ಶಾರದಾ ಶೆಟ್ಟಿ, ತಹಶೀಲ್ದಾರ್ ಕೃಷ್ಣ ಕಾಮಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh