ಮಂಗಳೂರು: ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಮೂಲಕ ಜಗತ್ತಿನ ಕೊಂಕಣಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಪ್ರಯತ್ನಕ್ಕೆ ಮಂಗಳೂರಿನಲ್ಲಿ ಚಾಲನೆ ದೊರೆತಿದೆ. 6,700ಕ್ಕೂ ಅಧಿಕ ಗಾಯಕರು 12 ದಿನಗಳ ಕಾಲ ನಿರಂತರವಾಗಿ ಗಾಯನ ನಡೆಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ ಮಂಗಳವಾರ ಆರಂಭವಾಯಿತು.
ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಂಡ್ ಸೊಭಾಣ್‌ನ 40ನೇ ವರ್ಷದ ಸಂಭ್ರಮದ ಅಂಗವಾಗಿ ನಗರದ ಪುರಭವನದಲ್ಲಿ ಆಯೋಜಿಸಿರುವ ಮಹಾಸಮ್ಮೇಳನವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಉದ್ಘಾಟಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಆಶೀರ್ವಚನ ನೀಡಿದರು.
ನವೆಂಬರ್ 3ರಿಂದ 15ರವರೆಗೆ ನಡೆಯುವ ಸಮ್ಮೇಳನದಲ್ಲಿ ‘ಕೊಂಕಣಿ ನಿರೊಂತರಿ–ಸೊಂಸಾರ್ ಸೊರಾಸೊರಿ’ ಹೆಸರಿನಲ್ಲಿ ನಿರಂತರ ಗಾಯನ ಮ್ಯಾರಥಾನ್ ನಡೆಯಲಿದೆ. 300 ಗಾಯನ ತಂಡಗಳ ಮೂಲಕ ಜಗತ್ತಿನ ವಿವಿಧ ಭಾಗಗಳ 6,700ಕ್ಕೂ ಅಧಿಕ ಗಾಯಕರು ಪಾಲ್ಗೊಳ್ಳಲಿದ್ದಾರೆ. ವಿವಿಧ ಉಪಭಾಷೆ ಮತ್ತು ಸಂಗೀತ ಪರಂಪರೆಗಳನ್ನು ಪ್ರತಿನಿಧಿಸುವ 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ.

ಗಾಯನ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಕೊಂಕಣಿ ಭಾಷೆಯ ಉಪಭಾಷೆಗಳು ಬೇರೆಯಾಗಿದ್ದರೂ ಭಾಷೆಯ ಭಾವನೆ ಮತ್ತು ಕೊಂಕಣಿ ಜನರ ಹೃದಯ ಒಂದೇ ಆಗಿದೆ ಎಂದರು.
ಗೋವಾದಲ್ಲಿ ಕೊಂಕಣಿಗೆ ಅಧಿಕೃತ ಭಾಷೆಯ ಸ್ಥಾನಮಾನವಿದ್ದು, ಸರ್ಕಾರದ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಮಂಗಳೂರಿನ ಕೊಂಕಣಿ ಭಾಷಿಕರು ಸರ್ಕಾರಿ ನೆರವಿಲ್ಲದೆ ತಮ್ಮ ಪರಿಶ್ರಮದಿಂದ ಭಾಷೆಯನ್ನು ಜೀವಂತವಾಗಿಟ್ಟಿದ್ದಾರೆ. ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸಲಾಗುತ್ತದೆ ಎಂದರು.
ಗೋವಾ ಮತ್ತು ಕರಾವಳಿ ಕರ್ನಾಟಕದ ಭೌಗೋಳಿಕ ಗಡಿಗಳು ಬೇರೆಬೇರೆಯಾಗಿದ್ದರೂ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಸಾಮ್ಯವಿದೆ. ಈ ಬಾಂಧವ್ಯ ಮುಂದುವರೆಯಬೇಕು ಎಂದರು.
ಗೋವಾದ ಶಾಸಕ ಮೈಕಲ್ ಲೋಬೋ ಮಾತನಾಡಿ, ಮಂಡ್ ಸೊಭಾಣ್ ಸಂಸ್ಥಾಪಕ ದಿವಂಗತ ಎರಿಕ್ ಒಝಾರಿಯೊ ಅವರು ಕೊಂಕಣಿ ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಹಾಸಮ್ಮೇಳನವನ್ನು ಎರಿಕ್ ಒಝಾರಿಯೊ ಅವರ ಸ್ಮರಣೆಗೆ ಸಮರ್ಪಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೋವಾ ಶಾಸಕರಾದ ಮೈಕಲ್ ಲೋಬೊ, ದೆಲಿಲಾ ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಡಾಲ್ಫಿ ಪ್ರಶಾಂತ್ ಡಿಸೋಜ, ಜಾಯ್ಸ್ ಒಝಾರಿಯೊ, ರಾಯ್ ಕ್ಯಾಸ್ಟೆಲಿನೊ ಇದ್ದರು.
ಮಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ ಸ್ವಾಗತಿಸಿದರು. ರೈನೆಲ್ ಸಿಕ್ವೇರಾ ನಿರೂಪಿಸಿದರು. ಬೆಳಿಗ್ಗೆ 6 ಗಂಟೆಗೆ ಮುಖ್ಯಮಂತ್ರಿ ಗುಮಟ ವಾದ್ಯ ನುಡಿಸುವ ಮೂಲಕ ನಿರಂತರ ಗಾಯನಕ್ಕೆ ಚಾಲನೆ ನೀಡಿದರು.



