ಸೋಮನಾಥ್ ಪುತ್ರನ್ ಆತ್ಮಹತ್ಯೆ ಪ್ರಕರಣ, ಹೋರಾಟಕ್ಕೆ ಸಜ್ಜಾದ ಮೊಗವೀರ ಸಂಯುಕ್ತ ಸಭಾ, 48 ಗಂಟೆಗಳ ಗಡುವು, ತಪ್ಪಿದರೆ ತೀವ್ರ ಹೋರಾಟದ ಎಚ್ಚರಿಕೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಮೀನುಗಾರ ಸಮುದಾಯದ ಸೋಮನಾಥ್ ಪುತ್ರನ್ ಅವರ ಆತ್ಮಹತ್ಯೆ ಪ್ರಕರಣ ಕರಾವಳಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣದ ತನಿಖೆ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭಾ ಸರ್ಕಾರಕ್ಕೆ ಗಡುವು ನೀಡಿದ್ದು, 48 ಗಂಟೆಯೊಳಗೆ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎಂಆರ್‌ಪಿಎಲ್ ವಿರುದ್ಧ ನಡೆದ ಪ್ರತಿಭಟನೆಗಿಂತಲೂ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಸಭಾದ ಅಧ್ಯಕ್ಷ ಭರತ್ ಉಳ್ಳಾಲ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸೋಮನಾಥ್ ಪುತ್ರನ್ ಅವರ ಆತ್ಮಹತ್ಯೆಗೆ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರ ದೌರ್ಜನ್ಯವೇ ಕಾರಣ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ಪ್ರಕರಣ ದಾಖಲಿಸಿ, ಅಮಾನತುಗೊಳಿಸಬೇಕು. ಮೃತರು ಕುಟುಂಬದ ಏಕೈಕ ದುಡಿಮೆಯ ಆಧಾರವಾಗಿದ್ದರು. ಅವರ ಪತ್ನಿ ದೂರು ನೀಡಿದ್ದರೂ ಪ್ರಕರಣದಲ್ಲಿ ಆರೋಪಿಗಳೆಂದು ಉಲ್ಲೇಖಿಸಿರುವ ಇಬ್ಬರನ್ನು ಈವರೆಗೆ ಬಂಧಿಸಿಲ್ಲ. ಎಫ್‌ಐಆರ್‌ನಲ್ಲಿ ಅವರ ಹೆಸರುಗಳನ್ನು ದಾಖಲಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. 48 ಗಂಟೆಯೊಳಗೆ ಬಂಧನವಾಗಬೇಕು. ಪೊಲೀಸ್ ಇಲಾಖೆಯಿಂದಲೇ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ ಕಾರಣ, ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು. 30 ದಿನಗಳೊಳಗೆ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದರು.

ಸುರತ್ಕಲ್ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ, ಸಾಮಾನ್ಯ ದಿನಚರಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ತಕ್ಷಣ ವಶಕ್ಕೆ ಪಡೆಯಬೇಕು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಕೋಟಿ ಪರಿಹಾರ ನೀಡಬೇಕು. ಪತ್ನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಹಾಗೂ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಕ್ಷಿದಾರರು ಮತ್ತು ಮೃತರ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದಿಲ್ಲ ಎಂಬ ಭರವಸೆ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ನಿರ್ದೇಶನ ನೀಡಿದ ಉನ್ನತಾಧಿಕಾರಿ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು. ಕರಾವಳಿಯ ಪೊಲೀಸ್ ಠಾಣೆಗಳಲ್ಲಿ ಮೀನುಗಾರರ ರಕ್ಷಣಾ ಘಟಕ ಸ್ಥಾಪಿಸಿ, ಮೀನುಗಾರರೊಂದಿಗೆ ಹೇಗೆ ವರ್ತಿಸಬೇಕು ಎಂಬ ಕುರಿತು ಪೊಲೀಸರಿಗೆ ವಿಶೇಷ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.

ರಾತ್ರಿ ವೇಳೆ ಸುರತ್ಕಲ್ ಬೀಚ್‌ನಿಂದ ದೂರದಲ್ಲಿರುವ ಸೋಮನಾಥ್ ಅವರ ಮನೆಯ ಸಮೀಪ ಜೋಡಿಯೊಂದು ಅನುಚಿತವಾಗಿ ವರ್ತಿಸುತ್ತಿದ್ದುದನ್ನು ಅವರು ಪ್ರಶ್ನಿಸಿದ್ದರು. ಸೋಮನಾಥ್ ಮದ್ಯ ಸೇವಿಸಿದ್ದರ ಬಗ್ಗೆ ಪರಿಶೀಲಿಸಿದ ಪೊಲೀಸರು, ಯುವತಿ ಮಾದಕ ವಸ್ತು ಸೇವಿಸಿದ್ದರೇ ಎಂಬುದನ್ನು ಪರಿಶೀಲಿಸಿದ್ದಾರೆಯೇ? ಯುವತಿ ನವದೆಹಲಿಯಿಂದ ಮಾದಕ ವಸ್ತು ಮಾರಾಟ ಮಾಡಲು ಬಂದಿದ್ದಾಳೆ ಎಂಬ ಅನುಮಾನವಿದೆ ಎಂದು ಆರೋಪಿಸಿದರು.

ಮೀನುಗಾರ ಮುಖಂಡ ಯತೀಶ್ ಬೈಕಂಪಾಡಿ ಅವರು ಮಾತನಾಡಿ, ಮೀನುಗಾರ ಸಮುದಾಯ ಕರಾವಳಿಯ ಭದ್ರತೆಯಲ್ಲಿ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಮುದಾಯದ ವ್ಯಕ್ತಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿರುವುದರಿಂದ ಸೂಕ್ತ ನ್ಯಾಯಾಂಗ ತನಿಖೆ ನಡೆಯಬೇಕು. ಸೋಮನಾಥ್ ಅವರ ತಪ್ಪು ಸಾಬೀತಾದರೆ ಹೋರಾಟ ನಿಲ್ಲಿಸುತ್ತೇವೆ. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಮೀನುಗಾರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಜಯ ಸಿ. ಕೋಟ್ಯಾನ್, ಶರಣ್, ಉದಯ್ ಕುಮಾರ್, ಚಂದ್ರಕಾಂತ್, ವಿನಯ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *