ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುವ ಆಧುನಿಕ ಬ್ರಾಕಿಥೆರಪಿ ಚಿಕಿತ್ಸಾ ವಿಧಾನದ ಪರಿಣತಿ ಹೆಚ್ಚಿಸುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಮಾರಿಷಸ್‌ನ ವೈದ್ಯರಿಗೆ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಅಂಗಸಂಸ್ಥೆಯಾದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರೇಡಿಯೇಶನ್ ಆಂಕಾಲಜಿ ವಿಭಾಗವು ‘ಹೈ ಡೋಸ್ ರೇಟ್ (ಎಚ್‌ಡಿಆರ್) ಬ್ರಾಕಿಥೆರಪಿ’ ಕುರಿತು ಈ ತರಬೇತಿ ಕಾರ್ಯಕ್ರಮ ನಡೆಸಿತು. ಮಾರಿಷಸ್‌ನ ರೇಡಿಯೇಶನ್ ಆಂಕಾಲಜಿಸ್ಟ್‌ಗಳು ಮತ್ತು ವೈದ್ಯಕೀಯ ಭೌತವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡರು.
ಕೆಎಂಸಿ ಮಂಗಳೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಬ್ರಾಕಿಥೆರಪಿ ಉಪಕರಣಗಳ ಜಾಗತಿಕ ಸಂಸ್ಥೆ ಬೆಬಿಗ್ ಮೆಡಿಕಲ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಕೆಎಂಸಿಯ ಅರಿವಳಿಕೆ ಹಾಗೂ ರೇಡಿಯೋಡಯಾಗ್ನೋಸಿಸ್ ವಿಭಾಗಗಳು ಸಹಕಾರ ನೀಡಿದವು.
ತರಬೇತಿಯಲ್ಲಿ ಎಚ್‌ಡಿಆರ್ ಬ್ರಾಕಿಥೆರಪಿಯ ಚಿಕಿತ್ಸಾ ವಿಧಾನಗಳು, ರೋಗಿಗಳ ಆಯ್ಕೆ, ಚಿಕಿತ್ಸೆಗೆ ಬಳಸುವ ಉಪಕರಣಗಳ ಅಳವಡಿಕೆ, ಚಿತ್ರಾಧಾರಿತ ಚಿಕಿತ್ಸಾ ಯೋಜನೆ, ವಿಕಿರಣದ ಪ್ರಮಾಣ ನಿರ್ಧಾರ, ಗುಣಮಟ್ಟದ ನಿರ್ವಹಣೆ ಮತ್ತು ವಿಕಿರಣ ಸುರಕ್ಷತೆ ಕುರಿತು ಪ್ರಾಯೋಗಿಕ ಹಾಗೂ ಸಂವಾದಾತ್ಮಕ ತರಬೇತಿ ನೀಡಲಾಯಿತು.
ವಿಶೇಷವಾಗಿ ಸ್ತ್ರೀರೋಗ ಸಂಬಂಧಿತ ಕ್ಯಾನ್ಸರ್ ಸೇರಿದಂತೆ ಹಲವು ಬಗೆಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಬ್ರಾಕಿಥೆರಪಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಚಿಕಿತ್ಸೆಯ ಪರಿಣಾಮಕಾರಿ ಬಳಕೆಗೆ ಪರಿಣತ ವೈದ್ಯರು ಮತ್ತು ವೈದ್ಯಕೀಯ ಭೌತವಿಜ್ಞಾನಿಗಳ ತಂಡ ಅಗತ್ಯವಾಗಿದೆ. ಇಂತಹ ಅಂತರರಾಷ್ಟ್ರೀಯ ತರಬೇತಿಗಳು ವೈದ್ಯಕೀಯ ಪರಿಣತಿ ಹೆಚ್ಚಿಸುವುದರ ಜತೆಗೆ ರೋಗಿಗಳ ಆರೈಕೆಯ ಗುಣಮಟ್ಟ ಸುಧಾರಿಸಲು ನೆರವಾಗಲಿವೆ.



