ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕುರಿತ ರಾಜಕೀಯ ಚರ್ಚೆಗಳು ತಾರಕಕ್ಕೇರುತ್ತಿರುವ ನಡುವೆಯೇ, ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ದೇಶಪಾಂಡೆ, ನವದೆಹಲಿಯಿಂದ ಹಿಂದಿರುಗುವಾಗಲೇ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ನಮ್ಮೊಂದಿಗೆ ಮಾತನಾಡುವ ವೇಳೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾಳೆಯೇ ರಾಜೀನಾಮೆ ನೀಡುವುದಾಗಿ ಹೇಳಿದರು. ಆದರೆ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ನಾವು ಮನವಿ ಮಾಡಿದ್ದೇವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.
ಇದೂವರೆಗೆ ಊಹಾಪೋಹಗಳ ಮಟ್ಟದಲ್ಲಿದ್ದ ಸಿಎಂ ರಾಜೀನಾಮೆ ಚರ್ಚೆಗೆ ದೇಶಪಾಂಡೆ ಹೇಳಿಕೆ ಮತ್ತಷ್ಟು ಬಲ ನೀಡಿದ್ದು, ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.
ಇನ್ನೊಂದೆಡೆ, ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕಾನೂನು ಸಚಿವ ಎಚ್. ಕೆ. ಪಾಟೀಲ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ಗಂಟೆಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿಗಳು ನಮ್ಮಲ್ಲೂ ಕಳವಳ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದೇವೆ. ಆದರೆ, ನಮ್ಮ ಮಾತುಗಳನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಸಂಪೂರ್ಣ ಮೌನವಾಗಿದ್ದರು ಎಂದು ಪಾಟೀಲ್ ಹೇಳಿದ್ದಾರೆ.
ಸಿಎಂ ಅವರ ಮೌನ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಇನ್ನಷ್ಟು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಹೈಕಮಾಂಡ್ ಸೂಚನೆಗೆ ಸಿದ್ದರಾಮಯ್ಯ ತಲೆಬಾಗಿರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿವೆ.
ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ, ನಾಳೆ ನಡೆಯಲಿರುವ ಜಂಟಿ ಸುದ್ದಿಗೋಷ್ಠಿಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ಒಳಗಿನ ವೇಗವಾದ ರಾಜಕೀಯ ಬೆಳವಣಿಗೆಗಳು, ಸಚಿವರ ಸರಣಿ ಭೇಟಿ ಹಾಗೂ ಹಿರಿಯ ನಾಯಕರ ಮನವಿಗಳು ರಾಜ್ಯ ರಾಜಕೀಯದಲ್ಲಿ ಮಹತ್ವದ ನಾಯಕತ್ವ ಬದಲಾವಣೆಯ ಸುಳಿವು ನೀಡುತ್ತಿರುವಂತಿದೆ.
What do you feel about this post?
Like
Love
Happy
Haha
Sad
