ಮಂಗಳೂರು: ಅಸ್ಸಾಂ ಹಾಗೂ ಬಿಹಾರ ಮೂಲದ 30 ಕ್ಕೂ ಹೆಚ್ಚು ಕಾರ್ಮಿಕರಿಗೆ ಸಮರ್ಪಕವಾಗಿ ಮಾಹಿತಿ ಕಲೆ ಹಾಕದೇ, ಪರಿಶೀಲನೆ ನಡೆಸದೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) ನೀಡಿದ ಆರೋಪದ ಹಿನ್ನೆಲೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆ ಇಬ್ಬರು ಸಿಬ್ಬಂದಿಯನ್ನು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ಅಮಾನತು ಮಾಡಿದ್ದಾರೆ. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಮಾನತುಗೊಂಡವರಲ್ಲಿ ಮಹಿಳಾ ಸಿಬ್ಬಂದಿ ಆಶಾ ಹಾಗೂ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಸೇರಿದ್ದಾರೆ. ವರ್ಷದ ಅವಧಿಯಲ್ಲಿ 31 ಮಂದಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿರುವ ಆರೋಪ ಇವರ ವಿರುದ್ಧ ಕೇಳಿ ಬಂದಿದೆ.
ಮಾಹಿತಿ ದೊರಕಿದ ಬಳಿಕ ಮಂಗಳೂರು ನಗರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಅಮಾನತು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸಕ್ಕೆ ಬಂದಿದ್ದ ಕೆಲವರು ಪಾಸ್‌ಪೋರ್ಟ್ ಪಡೆವ ಉದ್ದೇಶದಿಂದ ಮಧ್ಯವರ್ತಿಗಳ ನೆರವಿನಿಂದ ಬಜ್ಪೆ ಠಾಣೆಯಿಂದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ ಕೆಲವರ ವಿರುದ್ಧ ಕ್ರಿಮಿನಲ್ ಹಿನ್ನೆಲೆ ಹಾಗೂ ದೇಶ ವಿರೋಧಿ ಚಟುವಟಿಕೆಗಳ ಸಂಪರ್ಕದ ಅನುಮಾನಗಳಿರುವ ಮಾಹಿತಿ ಕೇಂದ್ರ ತನಿಖಾ ಸಂಸ್ಥೆಯೊಂದರ ಗಮನಕ್ಕೆ ಬಂದಿದ್ದು, ಬಳಿಕ ಮಂಗಳೂರು ಪೊಲೀಸರನ್ನು ಪ್ರಶ್ನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇಲಾಖಾ ತನಿಖೆಯಲ್ಲಿ ಠಾಣಾಧಿಕಾರಿ ಅನುಮತಿ ಪಡೆಯದೇ, ಅವರ ಪಾಸ್‌ವರ್ಡ್ ದುರುಪಯೋಗಪಡಿಸಿಕೊಂಡು ಸಿಬ್ಬಂದಿಯೇ ಕ್ಲಿಯರೆನ್ಸ್ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಇದಕ್ಕಾಗಿ ಮಧ್ಯವರ್ತಿಗಳಾದ ಭರತ್ ಎಕ್ಕಾರ್ ಹಾಗೂ ಮಮತಾ ಅವರಿಂದ ಹಣ ಪಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಭರತ್ ಎಕ್ಕಾರ್ ಮತ್ತು ಮಮತಾ ಅವರನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿಪ್ರಕರಣ ದಾಖಲಿಸಲಾಗಿದೆ. ಪೂರ್ಣ ಪ್ರಮಾಣದ ತನಿಖೆ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
