ಮಂಗಳೂರು: ಸೆಮಿಕಂಡಕ್ಟರ್ ಕೇಂದ್ರಿತ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ (ಎಸ್‌ಸಿಇಎಂ)ನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಎಫ್ ಪಿಜಿಎ -ಸ್ಥಳೀಯ ಮತ್ತು ಎಂಬೆಡೆಡ್ ಹಾರ್ಡ್‌ವೇರ್ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ಅನ್ಮಯ ಟೆಕ್ನಾಲಜೀಸ್ ಜತೆಗೆ ಮಾಡಿಕೊಂಡಿರುವ ಈ ಸಹಭಾಗಿತ್ವವು ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನ, ವಿಎಲ್ ಎಸ್ ಐ ವಿನ್ಯಾಸ, ಎಫ್ ಪಿಜಿಎ ಅಭಿವೃದ್ಧಿ, ಎಂಬೆಡೆಡ್ ಸಿಸ್ಟಮ್, ಎಐ ಹಾರ್ಡ್‌ವೇರ್ ವೇಗವರ್ಧನೆ ಹಾಗೂ ಎಡ್ಜ್ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಉದ್ಯಮಾಧಾರಿತ ಕೌಶಲ ಅಭಿವೃದ್ಧಿಗೆ ನೆರವಾಗಲಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ, ವಿಭಾಗದ ಮುಖ್ಯಸ್ಥ ಡಾ. ಅನುಷ್ ಬೇಕಲ್, ಅನ್ಮಯ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ಸಿಇಒ ಎನ್.ಜೆ. ಹರಿಪ್ರಸಾದ್, ಅಧ್ಯಾಪಕರು ಹಾಗೂ ವಿಭಾಗ ಸಲಹಾ ಸಮಿತಿ ಸದಸ್ಯರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಭಾರತ ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ತನ್ನ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಹಯೋಗ ಮಹತ್ವ ಪಡೆದಿದೆ. ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಉದ್ಯಮಕ್ಕೆ ಸಿದ್ಧಗೊಳಿಸುವ ಉದ್ದೇಶದಿಂದ ತಾಂತ್ರಿಕ ಮಾರ್ಗದರ್ಶನ, ಇಂಟರ್ನ್‌ಶಿಪ್, ತಜ್ಞರ ಉಪನ್ಯಾಸ ಹಾಗೂ ಯೋಜನಾ ಆಧಾರಿತ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಈ ಒಪ್ಪಂದವು ಸಹ್ಯಾದ್ರಿಯ ಹೊಸ ವಿಎಲ್ ಎಸ್ ಐ ವಿನ್ಯಾಸ ಮತ್ತು ಎಂಬೆಡೆಡ್ ಸಿಸ್ಟಮ್ಸ್ ಕಾರ್ಯಕ್ರಮಕ್ಕೂ ಬೆಂಬಲ ನೀಡಲಿದ್ದು, ವಿದ್ಯಾರ್ಥಿಗಳಿಗೆ ನೈಜ ಸೆಮಿಕಂಡಕ್ಟರ್ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನಗಳಲ್ಲಿ ಪ್ರಾಯೋಗಿಕ ಅನುಭವ ಒದಗಿಸಲಿದೆ.
ಇಸಿಇ ವಿಭಾಗವು ಈಗಾಗಲೇ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ವಿಎಲ್ ಎಸ್ ಐ ವಿನ್ಯಾಸದ ಶ್ರೇಷ್ಠತಾ ಕೇಂದ್ರ ಸ್ಥಾಪಿಸಿದ್ದು, ಅನ್ಮಯ ಟೆಕ್ನಾಲಜೀಸ್ ಸಹಭಾಗಿತ್ವವು ಎಫ್ ಪಿಜಿಎ ಕಂಪ್ಯೂಟಿಂಗ್, ಎಐ ವೇಗವರ್ಧನೆ ಹಾಗೂ ಸುಧಾರಿತ ಹಾರ್ಡ್‌ವೇರ್ ವಿನ್ಯಾಸ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಿದೆ ಎಂದು ವಿಭಾಗ ತಿಳಿಸಿದೆ.
What do you feel about this post?
Like
Love
Happy
Haha
Sad
