ಅಮದಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌, ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಸಿಇಒ ಡಾ. ದಿಲೀಷ್ ಶಶಿ ಅದ್ದೂರಿ ಚಾಲನೆ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿಕ್ಷಣ ಶಿರಸಿ
<

Spread the love

ಕಾರವಾರ: ಜಿಲ್ಲೆಯ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶಾಲೆಗಳು ಮಕ್ಕಳ ಕಲಿಕೆಗೆ ಪೂರಕವಾದ ಸ್ನೇಹಪರ ವಾತಾವರಣ ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.

<

ಅಮದಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಲ್ಲ, ಅದು ಮಕ್ಕಳ ಬದುಕು ರೂಪಿಸುವ ಶಕ್ತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಕೊನೆಯ ಮಗುವಿಗೂ ಉನ್ನತ ಮಟ್ಟದ ಶಿಕ್ಷಣ ತಲುಪಿಸುವುದು ಜಿಲ್ಲಾಡಳಿತದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಶಿಕ್ಷಕರ ಪ್ರಯತ್ನ ಮಾತ್ರ ಸಾಲದು. ಪಾಲಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ಸಕ್ರಿಯವಾಗಿ ಕೈಜೋಡಿಸಿದಾಗ ಮಾತ್ರ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರು ಪ್ರೀತಿ, ಕೌಶಲ್ಯ ಹಾಗೂ ನವೀನ ಬೋಧನಾ ವಿಧಾನಗಳ ಮೂಲಕ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಬೆಳೆಸಬೇಕು. ಸರ್ಕಾರ ನೀಡುತ್ತಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಹಾಗೂ ಪೌಷ್ಟಿಕ ಬಿಸಿಯೂಟದಂತಹ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.

ಮುಖ್ಯಾಂಶಗಳು
• ಅಮದಳ್ಳಿಯ ಕೆಪಿಎಸ್‌ನಲ್ಲಿ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ
• ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲಾಡಳಿತದ ವಿಶೇಷ ಒತ್ತು
• ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ
• ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ

ಕೋಟ್
ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಶಿಕ್ಷಣದ ಮೂಲಕವೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ.”*
ಡಾ. ದಿಲೀಷ್ ಶಶಿ, ಜಿಪಂ ಸಿಇಒ

ಉತ್ತಮ ಕಲಿಕೆ–ಉಜ್ವಲ ಭವಿಷ್ಯಕ್ಕೆ ಒತ್ತು: ಡಿಡಿಪಿಐ

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲತಾ ನಾಯಕ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಯೋಜನೆಗಳು ಹಾಗೂ ಮಕ್ಕಳ ದಾಖಲಾತಿ ಆಂದೋಲನದ ರೂಪುರೇಷೆಗಳನ್ನು ವಿವರಿಸಿದರು.

‘ಉತ್ತಮ ಕಲಿಕೆ–ಉಜ್ವಲ ಭವಿಷ್ಯ’ ಆಶಯದಡಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್‌ಎಲ್‌ಎನ್) ಅಭಿವೃದ್ಧಿಗೆ ಜಿಲ್ಲೆಯಾದ್ಯಂತ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಹಬ್ಬದ ಸಂಭ್ರಮದಲ್ಲಿ ಶಾಲಾ ಆರಂಭ

ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲಾ ಆವರಣವನ್ನು ಹಸಿರು ತೋರಣ, ಬಲೂನ್‌ಗಳು ಹಾಗೂ ಆಕರ್ಷಕ ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಪುಟ್ಟ ಮಕ್ಕಳನ್ನು ಹಾಗೂ ಇತರ ವಿದ್ಯಾರ್ಥಿಗಳನ್ನು ಮಂಗಳವಾದ್ಯ, ಪುಷ್ಪವೃಷ್ಟಿ ಹಾಗೂ ಸಾಂಪ್ರದಾಯಿಕ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು.

ಶಾಲೆಯತ್ತ ಮರಳಿದ ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಉತ್ಸಾಹ, ಸಂಭ್ರಮ ಹಾಗೂ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *