ಬೆಳ್ತಂಗಡಿ: ಮಾದಕ ದ್ರವ್ಯ ವ್ಯಸನವು ವ್ಯಕ್ತಿಯ ಭವಿಷ್ಯವನ್ನಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜವನ್ನೂ ಸಂಕಷ್ಟಕ್ಕೆ ತಳ್ಳುತ್ತದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಮಾದಕ ವ್ಯಸನಕ್ಕೆ ಒಳಗಾಗಬಾರದು. ಸ್ನೇಹಿತರು ವ್ಯಸನಕ್ಕೆ ಬಲಿಯಾಗುತ್ತಿರುವುದು ಕಂಡುಬಂದರೆ ಮುಚ್ಚಿಡದೆ ಶಿಕ್ಷಕರು, ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಅವರನ್ನು ರಕ್ಷಿಸುವ ಪ್ರಯತ್ನ ಮಾಡಬೇಕು ಎಂದು ಬೆಳ್ತಂಗಡಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಬೆಳ್ತಂಗಡಿ ಉಪ ವಿಭಾಗ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಆಶ್ರಯದಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ‘ಸಂಗಮಿತ್ರ’ ಎಂಬ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇದರ ಮೂಲಕ ಮಾದಕ ವ್ಯಸನಿಗಳ ಗುರುತಿಸುವಿಕೆ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪೋಷಕರು ಅಪಾರ ಶ್ರಮವಹಿಸುತ್ತಿರುವುದರಿಂದ ಯಾವುದೇ ರೀತಿಯ ಮಾದಕ ವಸ್ತುಗಳಿಂದ ದೂರವಿದ್ದು ವಿದ್ಯಾಭ್ಯಾಸ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಮಾಹಿತಿ ದೊರೆತಲ್ಲಿ ಚೈಲ್ಡ್ ಹೆಲ್ಪ್‌ಲೈನ್ 1098 ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ ವಹಿಸಿದ್ದರು.
ಬೆಳ್ತಂಗಡಿ ಉಪ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್., ಪೊಲೀಸ್ ಉಪನಿರೀಕ್ಷಕ ಆನಂದ್ ಎಂ., ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ನಾಯ್ಕ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅನುಶ್ರೀ ಇದ್ದರು.
ಉಪನ್ಯಾಸಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
What do you feel about this post?
Like
Love
Happy
Haha
Sad



