ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಾಲೆ (ಜಾಂಡಿಸ್) ಹಾಗೂ ಡೆಂಗೆ ಪ್ರಕರಣಗಳು ನಿಧಾನವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಬದಲು ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ಕುಡಿವ ನೀರಿನ ಬಳಕೆ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಡಿಎಚ್ ಒ ಡಾ. ಎಚ್.ಆರ್. ತಿಮ್ಮಯ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನ ಕುದ್ರೋಳಿ, ಅಳಕೆ ಹಾಗೂ ಡೊಂಗರಕೇರಿ ಪ್ರದೇಶಗಳಲ್ಲಿ ಜೂನ್ 23 ರಿಂದ ಇದೂವರೆಗೆ 19 ಕಾಮಾಲೆ ರೋಗದ ಪ್ರಕರಣಗಳು ಪತ್ತೆಯಾಗಿವೆ. ಈ ಪ್ರದೇಶಗಳ 832 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 40 ಕಡೆಗೆ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ ಒಂದು ಮಾದರಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 13 ಮಾದರಿಗಳ ವರದಿ ಬರಬೇಕಿದೆ ಎಂದರು.
ಜನವರಿಯಿಂದ ಜೂನ್ವರೆಗೆ ಜಿಲ್ಲೆಯಲ್ಲಿ ಹೆಪಟೈಟಿಸ್–ಎ ಮತ್ತು ಇ ಸೋಂಕಿನ 35 ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು–ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪ್ರಕರಣಗಳು ಸ್ವಲ್ಪ ಹೆಚ್ಚಳ ಆಗಿವೆ. ಸುರಕ್ಷಿತ ಕುಡಿವ ನೀರು, ವೈಯಕ್ತಿಕ ಸ್ವಚ್ಛತೆ ಹಾಗೂ ಕೈ ತೊಳೆವ ಅಭ್ಯಾಸದಿಂದ ಈ ಸೋಂಕುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರು ಮಾತನಾಡಿ, ಈ ವರ್ಷ ಜನವರಿಯಿಂದ ಜೂನ್ವರೆಗೆ ಜಿಲ್ಲೆಯಲ್ಲಿ 27 ಡೆಂಗೆ ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 9 ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ 8 ಪ್ರಕರಣಗಳು ವರದಿ ಆಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳು ಕಡಿಮೆ ಇದ್ದರೂ, ಮುಂದಿನ ದಿನಗಳಲ್ಲಿ ಮಳೆ ತೀವ್ರಗೊಂಡರೆ ಡೆಂಗೆ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
2023 ರಲ್ಲಿ 566, 2024ರಲ್ಲಿ 534 ಹಾಗೂ 2025ರಲ್ಲಿ 190 ಡೆಂಗೆ ಪ್ರಕರಣಗಳು ದಾಖಲಾಗಿದ್ದವು. ಡೆಂಗೆಗೆ ನಿರ್ದಿಷ್ಟ ಔಷಧ ಇಲ್ಲದ ಕಾರಣ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದು, ಸಾಕಷ್ಟು ವಿಶ್ರಾಂತಿ ಮತ್ತು ದ್ರವಾಹಾರ ಸೇವಿಸುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದರು.
ಹಿರಿಯ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನ: ಶಿರ್ತಾಡಿ, ನಾರಾವಿ, ಈಶ್ವರಮಂಗಲ, ಮಾಣಿ, ಐತ್ತಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಉಪ್ಪಿನಂಗಡಿ, ಮೂಡುಬಿದಿರೆ, ಕಡಬ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಿರಿಯ ವೈದ್ಯರ ಕೊರತೆ ಇದೆ. ಎಂಬಿಬಿಎಸ್ ಪದವೀಧರ ವೈದ್ಯರು ಆರೋಗ್ಯ ಇಲಾಖೆಯನ್ನು ನೇರವಾಗಿ ಸಂಪರ್ಕಿಸಿದರೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುವುದು ಎಂದು ಡಿಎಚ್ ಒ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದರು.
ನಾಗುರಿ ದುರಂತ: ಚಿಕಿತ್ಸಾ ವೆಚ್ಚ ಭರಿಸುವ ಇಲಾಖೆ: ಮಂಗಳೂರಿನ ನಾಗುರಿ ದುರಂತದಲ್ಲಿ ಗಾಯಗೊಂಡ ಇಬ್ಬರು ಮಕ್ಕಳ ಚಿಕಿತ್ಸೆಗೆ ತಲಾ 30 ಸಾವಿರವನ್ನು ಎಬಿಆರ್ಕೆ ಯೋಜನೆ ಅಡಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಗಾಯಾಳು ಬಾಲಕೃಷ್ಣ ಆಚಾರ್ಯ ಅವರಿಗೆ ಇಎಸ್ಐನಿಂದ 63 ಸಾವಿರ ಹಾಗೂ ಎಬಿಆರ್ಕೆಯಿಂದ 20 ಸಾವಿರ ನೆರವು ದೊರೆಯಲಿದ್ದು, ಅಗತ್ಯ ಇದ್ದರೆ ಹೆಚ್ಚುವರಿ ನೆರವು (ಟಾಪ್–ಅಪ್) ನೀಡುವ ವ್ಯವಸ್ಥೆಯೂ ಇದೆ ಎಂದು ತಿಳಿಸಿದರು.
ಆರ್ಸಿಎಚ್ ಅಧಿಕಾರಿ ಡಾ. ರಾಜೇಶ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಸುದರ್ಶನ್, ಕೀಟಶಾಸ್ತ್ರ ತಜ್ಞೆ ಮಂಜುಳಾ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಇದ್ದರು.
What do you feel about this post?
Like
Love
Happy
Haha
Sad



