ವೆಂಕಟ್ ಭಾರದ್ವಾಜ್ ನಿರ್ದೇಶನದ ರಕ್ಕಿ, ಭೂಗತ ರೌಡಿಗಳ ಕಥೆ ಜತೆಗೆ ಕೌಟುಂಬಿಕ, ಲವ್ ಸ್ಟೋರಿ ಟಚ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ ಸಿನಿಮಾ

Spread the love

ಬೆಂಗಳೂರು: ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂತಹದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು ಬಂದಿವೆ. ಆದರೆ ಕೌಟುಂಬಿಕ ಕಥೆಯನ್ನು ಕೂಡ ಇಷ್ಟು ಚೆನ್ನಾಗಿ ಹೇಳಬಹುದು ಎನ್ನವುದನ್ನು ಸಾಬೀತು ಮಾಡಿರುವ ಚಿತ್ರ ರಕ್ಕಿ.

<

ಅಪರಾಧದ ಹಿನ್ನೆಲೆಯ ಚಿತ್ರವಾದರೂ ಎಲ್ಲಿಯೂ ರಕ್ತಪಾತವಿಲ್ಲ. ಕೇಂದ್ರ ಪಾತ್ರ ರಿಕ್ಕಿಯ ವಿಚಾರಕ್ಕೆ ಬರುವುದಾದರೆ ಯುವನಟರ ಸಾಲಿಗೆ ಸೇರಿಸಬಹುದಾದ ಪ್ರತಿಭಾವಂತ ಕಲಾವಿದ ರಿಕ್ಕಿ. ನಟನೆ ಮಾತ್ರವಲ್ಲದೆ ಆ್ಯಕ್ಷನ್ ದೃಶ್ಯಗಳಲ್ಲಿಯೂ ಗಮನ ಸೆಳೆಯುತ್ತಾರೆ.

ಕಥೆ: ರಕ್ಕಿ (ರಕ್ಕಿ ಸುರೇಶ್) ಎತ್ತರವಾದ, ಸುಂದರವಾದ ರೌಡಿ! ಆತ ಅಂಡರ್‌ವರ್ಲ್ಡ್ ಆಪರೇಟರ್ ಡ್ಯಾನಿ (ಬಿ. ಸುರೇಶ) ಕೈ‌ಕೆಳಗೆ ಕೆಲಸ ಮಾಡುತ್ತಾನೆ. ಬಾಸ್ ಹೇಳಿದಂತೆ ರಕ್ಕಿ ಎಲ್ಲಾ ಕೆಲಸಗಳನ್ನು ಮಾಡುತ್ತಾನೆ. ಆದರೆ ಡ್ಯಾನಿಯ ಮಗಳು ಸಿರಿ (ಪಲ್ಲವಿ) ಅವನನ್ನು ಹುಚ್ಚು ಹುಚ್ಚಾಗಿ ಪ್ರೀತಿಸುತ್ತಾಳೆ. ಮೊದಲಿಗೆ ರಕ್ಕಿ ಅವಳ ಪ್ರೀತಿಯನ್ನು ತಿರಸ್ಕರಿಸಿದರೂ, ಆನಂತರ ಒಪ್ಪಿಕೊಳ್ಳುತ್ತಾನೆ. ಸಿರಿ ರಕ್ಕಿ ತನ್ನ ಕೆಟ್ಟ ಕೆಲಸಗಳನ್ನು ಬಿಟ್ಟುಬಿಡಬೇಕೆಂದು ಬಯಸುತ್ತಾಳೆ. ಆದರೆ ಶಾಸಕ ಸ್ಥಾನದ ಚುನಾವಣಾ ಟಿಕೆಟ್ ಆಕಾಂಕ್ಷಿಯೊಬ್ಬನನ್ನು ಮುಗಿಸಲು ಡ್ಯಾನಿ ಕೈಗೊಂಡ ದೊಡ್ಡ ಡೀಲ್‌ನಿಂದ ಹಲವಾರು ಅನಿರೀಕ್ಷಿತ ಬೆಳವಣಿಗೆಗಳು ಆಗುತ್ತವೆ.

ಡ್ಯಾನಿ ಕೆಲಸವನ್ನು ಮುಗಿಸಲು ರಕ್ಕಿ ಮತ್ತು ಗಣೇಶ್ (ಸಂಪತ್) 130 ಕಿಲೋಮೀಟರ್ ಪ್ರಯಾಣ ಮಾಡ ಬೇಕಾಗುತ್ತದೆ. ಈ ಹಂತದಲ್ಲಿ ಕೆಲವು ಅಚ್ಚರಿಯ ಸತ್ಯಗಳು ಬಹಿರಂಗವಾಗಿ ಕ್ಲೈಮ್ಯಾಕ್ಸ್‌ಗೆ ಹೊಸ ಆಶಯ ನೀಡುತ್ತವೆ. ಇಲ್ಲಿ ಚಾಂದಿನಿ (ಆಶಿಕಾ) ಮತ್ತು ಒಬ್ಬ ರಾಜಕಾರಣಿಯೂ ಇದ್ದಾರೆ. ಈ ಸಮಯದಲ್ಲಿ ರಕ್ಕಿ ಮತ್ತು ಚಾಂದಿನಿಯ ಕಥೆಯನ್ನು ಹೇಳುವ ಫ್ಲ್ಯಾಶ್‌ಬ್ಯಾಕ್ ಬರುತ್ತದೆ.

ಆ ಡೀಲ್ ರಕ್ಕಿ ಮತ್ತು ಗಣೇಶ್‌ನಿಂದ ಮುಗಿಯುತ್ತದೆಯಾ? ಅವನ ಇಂದಿನ ಮತ್ತು ಹಿಂದಿನ ಪ್ರೀತಿಗೆ ಏನಾಗುತ್ತದೆ? ರಕ್ಕಿ ಜೀವನದಲ್ಲಿ ಹೇಗೆ ನೆಲೆ ಕಂಡುಕೊಳ್ಳುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ನೀವು ರಕ್ಕಿ ಚಿತ್ರವನ್ನು ನೋಡಲೇಬೇಕು.

ಕಲಾವಿದರ ಅಭಿನಯ: ಮೊದಲೇ ಹೇಳಿದಂತೆ ರಕ್ಕಿ ಸುರೇಶ್ ಖಂಡಿತವಾಗಿ ಒಬ್ಬ ಸ್ಟಾರ್ ಮೆಟಿರಿಯಲ್. ಫೈಡ್ ಮತ್ತು ಡ್ಯಾನ್ಸ್‌ನಲ್ಲಿ ಕೂಡ ಚೆನ್ನಾಗಿದ್ದಾರೆ. ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಚೊಚ್ಚಲ ಚಿತ್ರದಲ್ಲೇ ರಕ್ಕಿ ಸುರೇಶ್ ಮನ ಗೆಲ್ಲುತ್ತಾರೆ. ದ್ವಿತೀಯಾರ್ಧದ ಫ್ಲ್ಯಾಶ್‌ಬ್ಯಾಕ್ ಭಾಗಗಳಲ್ಲಿ ಅವರು ಟಾಪ್ ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಅವರಂತೆ ಕಾಣುತ್ತಾರೆ. ಆದರೂ ರಕ್ಕಿ ಸುರೇಶ್ ಸಂಭಾಷಣೆ ಹೇಳುವಿಕೆಯಲ್ಲಿ ಇನ್ನೂ ಸುಧಾರಿಸಿಕೊಳ್ಳಬೇಕು.

ಚಿತ್ರದ ಇಬ್ಬರು ನಾಯಕಿಯರಾದ ಪಲ್ಲವಿ ಮತ್ತು ಆಶಿಕಾ ಉತ್ತಮ ಅಭಿನಯ ನೀಡಿದ್ದಾರೆ. ನೋಟದಲ್ಲೇ ನಾಯಕ ನಟಿಯ ಆಕರ್ಷಣೆಯಿದೆ. ಇಬ್ಬರಿಗೂ ಬೆಳ್ಳಿತೆರೆಯಲ್ಲಿ ಉಜ್ವಲ ಭವಿಷ್ಯವಿದೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಮತ್ತು ಬಾಲ ರಾಜ್‌ವಾಡಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಕಥೆಗೆ ವಿಭಿನ್ನ ಆಯಾಮ ನೀಡುವಂಥ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ಸಂಗೀತದ ಸಂಗತಿಯಲ್ಲೂ ಚಿತ್ರ ತುಂಬಾ ಚೆನ್ನಾಗಿದೆ. ಲೋಕಿ ತವಸ್ಯ ಅವರು “ವೈಬ್ ಆಗಿದೆ..” ಮತ್ತು “ನೀನು ನನಗಂತ ಬರೆದ ಭಗವಂತ” ಎಂಬ ಎರಡು ಮಧುರ ಹಾಡುಗಳನ್ನು ಸಂಯೋಜಿಸಿದ್ದಾರೆ. ಇಂಟ್ರೋ ಹಾಡು, ರೌಡಿ ಹಾಡು ಮತ್ತು ಫ್ಯಾಮಿಲಿ ಹಾಡು “ಹೇಟ್ ಯು ಡ್ಯಾಡಿ ಹೇಟ್ ಯು ಮಮ್ಮಿ…” ಕೂಡ ಕೇಳಲು ಯೋಗ್ಯವಾಗಿವೆ.

122 ನಿಮಿಷಗಳ ಚಿತ್ರದಲ್ಲಿ ಛಾಯಾಗ್ರಾಹಕ ಐಸಾಕ್ ಪ್ರಭಾಕರ್ ಅತ್ಯಂತ ಸುಂದರವಾದ ದೃಶ್ಯ ಅನುಭವ ನೀಡಿದ್ದಾರೆ. ಆಕ್ಷನ್ ನಿರ್ದೇಶಕ ಟೈಗರ್ ಶಿವು ಕೆಲವು ಉತ್ತಮ ಆಕ್ಷನ್ ಸನ್ನಿವೇಶಗಳನ್ನು ತೋರಿಸಿದ್ದಾರೆ.

ಸಂಭಾಷಣೆ ಗುಣಮಟ್ಟ ಇನ್ನಷ್ಟು ಹೆಚ್ಚಿಸಬಹುದಿತ್ತು. ಆದರೆ “ಸರಸ್ವತಿ ಅಂದ್ರೆ ಟ್ಯಾಲೆಂಟ್, ಲಕ್ಷ್ಮಿ ಅಂದ್ರೆ ಎಂಟರ್‌ಟೈನ್‌ಮೆಂಟ್…” ಎನ್ನುವ ಡೈಲಾಗ್ ಖಂಡಿತವಾಗಿ ಗಮನ ಸೆಳೆಯುತ್ತದೆ.ಒಟ್ಟಿನಲ್ಲಿ ಯಾವ ದೃಷ್ಟಿಕೋನದಿಂದ ನೋಡಿದರೂ ರಕ್ಕಿ ಖಂಡಿತವಾಗಿ ಒಂದು ಒಳ್ಳೆಯ ಸಿನೆಮಾ. ಗೆಳೆಯರೊಂದಿಗೆ, ಪ್ರೇಯಸಿಯೊಂದಿಗೆ ಮಾತ್ವವಲ್ಲ ಕುಟುಂಬದೊಂದಿಗೆ ವೀಕ್ಷಿಸಲು ಕೂಡ ಇದೇ ಮೊದಲ ಆಯ್ಕೆ ಎಂದು ಧೈರ್ಯದಿಂದ ಹೇಳಬಹುದು.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *