ಮಂಗಳೂರು: ಓಣಂ ರಜೆ ಪ್ರಯುಕ್ತ ಐಆರ್ಸಿಟಿಸಿ ‘ಭಾರತ ಗೌರವ’ ವಿಶೇಷ ಪ್ರವಾಸಿ ರೈಲ ಅನ್ನು ಆಯೋಜಿಸಿದ್ದು, ಅಹಮದಾಬಾದ್ ಸೇರಿದಂತೆ ಗೋಲ್ಡನ್ ಟ್ರಯಾಂಗಲ್ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ವಿಶೇಷ ರೈಲು ಅ 22 ರಂದು ಮಂಗಳೂರಿನ ಮೂಲಕ ಪ್ರಯಾಣ ಆರಂಭಿಸಿ, ಸೆಪ್ಟೆಂಬರ್ 1 ರಂದು ವಾಪಸ್ ಆಗಲಿದೆ ಎಂದು ಐಆರ್ ಸಿಟಿಸಿ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಹಮದಾಬಾದ್ನ ಸಾಬರ್ಮತಿ ಆಶ್ರಮ, ರಾಣಿ ಕಿ ವಾವ್, ಅಡಲಜ್ ಮೆಟ್ಟಿಲು ಬಾವಿ, ಏಕತಾ ನಗರದ ಏಕತಾ ಪ್ರತಿಮೆ, ದೆಹಲಿಯ ಕೆಂಪುಕೋಟೆ, ರಾಜ್ಘಾಟ್, ಇಂಡಿಯಾ ಗೇಟ್, ಲೋಟಸ್ ದೇವಾಲಯ, ಕುತುಬ್ ಮಿನಾರ್, ಆಗ್ರಾದ ತಾಜ್ ಮಹಲ್ ಹಾಗೂ ಜೈಪುರದ ಆಮೇರ್ ಕೋಟೆ, ಹವಾ ಮಹಲ್, ಸಿಟಿ ಪ್ಯಾಲೆಸ್ ಮತ್ತು ಜಂತರ್ ಮಂತರ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ ಇರಲಿದೆ ಎಂದರು.
ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ಹಂತಗಳ ಪ್ಯಾಕೇಜ್ಗಳನ್ನು ಪರಿಚಯಿಸಲಾಗಿದೆ. ಎಕಾನಮಿ ವರ್ಗದ ಪ್ರವಾಸಕ್ಕೆ 21,190, ಸ್ಟ್ಯಾಂಡರ್ಡ್ ವರ್ಗ 31,720, ಕಂಫರ್ಟ್ ವರ್ಗ 37,570 ಹಾಗೂ ಸುಪೀರಿಯರ್ ವರ್ಗ 52,870 ನಿಗದಿ ಪಡಿಸಲಾಗಿದೆ. ಎಲ್ಲ ಪ್ಯಾಕೇಜ್ಗಳಲ್ಲಿ ರೈಲು ಪ್ರಯಾಣ, ವಸತಿ, ಸ್ಥಳೀಯ ಸಾರಿಗೆ, ದಿನಕ್ಕೆ ಮೂರು ಹೊತ್ತು ಸಸ್ಯಾಹಾರಿ ಊಟ, ಕೋಚ್ ಅಟೆಂಡೆಂಟ್, ಭದ್ರತಾ ಸಿಬ್ಬಂದಿ, ಪ್ರಯಾಣ ವಿಮೆ ಹಾಗೂ ಅನ್ವಯವಾಗುವ ತೆರಿಗೆ ಒಳಗೊಂಡಿದೆ ಎಂದರು.
ಮಂಗಳೂರಿನಿಂದ ಎರಡು ವಿಶೇಷ ವಿಮಾನ ಪ್ರವಾಸ ಪ್ಯಾಕೇಜ್ಗಳನ್ನೂ ಐಆರ್ಸಿಟಿಸಿ ಘೋಷಿಸಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 1ರವರೆಗೆ ಬೋಧಗಯಾ, ಕಾಶಿ, ಪ್ರಯಾಗರಾಜ್ ಮತ್ತು ಅಯೋಧ್ಯೆ ಪ್ರವಾಸ ನಡೆಯಲಿದ್ದು, ಪ್ರತಿ ವ್ಯಕ್ತಿಗೆ 31,000ರಿಂದ ಶುಲ್ಕ ಆರಂಭವಾಗಲಿದೆ ಎಂದು ಐ ಆರ್ ಸಿಟಿಸಿ ಸಿನಿಯರ್ ಎಕ್ಸಿಕ್ಯೂಟಿವ್ ವಿನೋದ್ ನಾಯರ್ ತಿಳಿಸಿದರು.
ಸೆ. 12ರಿಂದ 17 ರವರೆಗೆ ಶ್ರೀನಗರ, ಗುಲ್ಮಾರ್ಗ್, ಸೋನಮಾರ್ಗ್ ಹಾಗೂ ಪಹಲ್ಗಾಮ್ ಒಳಗೊಂಡ ಕಾಶ್ಮೀರ ಪ್ರವಾಸದ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆರಂಭಿಕ ಶುಲ್ಕ ಪ್ರತಿ ವ್ಯಕ್ತಿಗೆ 51,200 ಆಗಿದೆ. ಈ ಎರಡೂ ವಿಮಾನ ಪ್ಯಾಕೇಜ್ಗಳಲ್ಲಿ ವಿಮಾನ ಪ್ರಯಾಣ, ವಸತಿ, ಊಟ, ಸ್ಥಳೀಯ ಸಾರಿಗೆ, ಪ್ರವಾಸ ಸಂಯೋಜಕರ ಸೇವೆ ಹಾಗೂ ಪ್ರಯಾಣ ವಿಮೆ ಒಳಗೊಂಡಿರುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರು ರಜೆ ಪ್ರಯಾಣ ಸೌಲಭ್ಯ (ಎಲ್ಟಿಸಿ) ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್ಸೈಟ್: www.irctctourism.com ಹಾಗೂ ಐಆರ್ಸಿಟಿಸಿ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ – 8287932043 / 0824-2001936 ಸಂಪರ್ಕ ಮಾಡಬಹುದು ಎಂದು ತಿಳಿಸಿದರು.
ಟೂರ್ ಮ್ಯಾನೇಜರ್ ನಿಹಾಲ್ ಇದ್ದರು.
What do you feel about this post?
Like
Love
Happy
Haha
Sad



