ಮಂಗಳೂರು: ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಹಾಗೂ ವಿಶ್ವದರ್ಜೆಯ ಪ್ರಯಾಣ ಅನುಭವ ಕಲ್ಪಿಸಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಮಟ್ಟದ ಅತ್ಯುನ್ನತ ಗ್ರಾಹಕ ಸೇವಾ ಮಾನ್ಯತೆ ಲಭಿಸಿದೆ. ಈ ಮೂಲಕ ದೇಶದಲ್ಲಿ ಈ ಗೌರವ ಪಡೆದ ನಾಲ್ಕನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಮಾನ ನಿಲ್ದಾಣಗಳ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರ ಸೇವೆಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಅಂತರರಾಷ್ಟ್ರೀಯ ಸಂಸ್ಥೆಯು ಈ ಮಾನ್ಯತೆಯನ್ನು ನೀಡಿದೆ. ಪ್ರಯಾಣಿಕರ ಅಗತ್ಯಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸೇವೆ, ಆಡಳಿತ, ಕಾರ್ಯಾಚರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಾಧಿಸಿರುವ ಪ್ರಗತಿಯನ್ನು ಪರಿಗಣಿಸಿ ಅತ್ಯುನ್ನತ ಹಂತದ ಮಾನ್ಯತೆ ನೀಡಲಾಗಿದೆ.
ಈ ಸಾಧನೆಯೊಂದಿಗೆ ಅದಾನಿ ವಿಮಾನ ನಿಲ್ದಾಣಗಳ ಜಾಲದಲ್ಲಿ ಮುಂಬೈ ಮತ್ತು ಅಹಮದಾಬಾದ್ ಬಳಿಕ ಮಂಗಳೂರು ಮೂರನೇ ವಿಮಾನ ನಿಲ್ದಾಣವಾಗಿದೆ. ರಾಜ್ಯದಲ್ಲಿ ಬೆಂಗಳೂರು ಬಳಿಕ ಈ ಗೌರವ ಪಡೆದ ಎರಡನೇ ವಿಮಾನ ನಿಲ್ದಾಣವಾಗಿದೆ.
ಮಂಗಳೂರು ವಿಮಾನ ನಿಲ್ದಾಣವು 2024ರ ಫೆಬ್ರುವರಿಯಲ್ಲಿ ಮೂರನೇ ಹಂತದ, 2025ರ ಜುಲೈನಲ್ಲಿ ನಾಲ್ಕನೇ ಹಂತದ ಮಾನ್ಯತೆ ಪಡೆದಿತ್ತು. ಈಗ ಕೇವಲ ಒಂದು ವರ್ಷದೊಳಗೆ ಅತ್ಯುನ್ನತ ಐದನೇ ಹಂತದ ಮಾನ್ಯತೆ ಗಳಿಸಿರುವುದು ಪ್ರಯಾಣಿಕರ ಸೇವೆಯ ಗುಣಮಟ್ಟವನ್ನು ನಿರಂತರವಾಗಿ ಹೆಚ್ಚಿಸಿರುವುದಕ್ಕೆ ಸಾಕ್ಷಿಯಾಗಿದೆ.
ಪ್ರಯಾಣಿಕರಿಗೆ ಸುಲಭ ಮತ್ತು ವೇಗದ ಸೇವೆ ಒದಗಿಸಲು ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಅಳವಡಿಕೆ, ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿ ಸೇವೆಯಲ್ಲಿ ನಿರಂತರ ಸುಧಾರಣೆ, ಸಿಬ್ಬಂದಿಗೆ ಸೇವಾ ಮನೋಭಾವ ಬೆಳೆಸುವ ತರಬೇತಿ, ಮೂಲಸೌಕರ್ಯ ವಿಸ್ತರಣೆ, ದಿವ್ಯಾಂಗರಿಗೆ ಅನುಕೂಲಕರ ಸೌಲಭ್ಯಗಳು ಹಾಗೂ ಭದ್ರತಾ ಸಿಬ್ಬಂದಿ, ವಲಸೆ ಇಲಾಖೆ, ಸುಂಕ ಇಲಾಖೆ ಮತ್ತು ವಿಮಾನಯಾನ ಸಂಸ್ಥೆಗಳ ಸಮನ್ವಯದ ಕಾರ್ಯವೈಖರಿ ಈ ಸಾಧನೆಗೆ ಕಾರಣವಾಗಿದೆ.
ಈ ಮಾನ್ಯತೆ ನಮ್ಮ ಸಿಬ್ಬಂದಿ ಹಾಗೂ ವಿವಿಧ ಪಾಲುದಾರ ಸಂಸ್ಥೆಗಳ ಒಗ್ಗಟ್ಟಿನ ಪರಿಶ್ರಮಕ್ಕೆ ದೊರೆತ ಗೌರವವಾಗಿದೆ. ಮುಂದೆಯೂ ಪ್ರತಿಯೊಬ್ಬ ಪ್ರಯಾಣಿಕನಿಗೂ ಸುರಕ್ಷಿತ, ಸುಗಮ ಮತ್ತು ಉತ್ತಮ ಪ್ರಯಾಣ ಅನುಭವ ಕಲ್ಪಿಸಲು ಬದ್ಧರಾಗಿದ್ದೇವೆ” ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad



