ಮಂಗಳೂರಿನ ಉರ್ವ ಕ್ರೀಡಾಂಗಣದಲ್ಲಿ 39ನೇ ರಾಷ್ಟ್ರೀಯ ಚೆಸ್ ಚಾಂಪಿಯನ್‌ ಷಿಪ್ ಅ. 2ರಿಂದ ಪ್ರಾರಂಭ: ಡಾ. ಅಮರಶ್ರೀ ಶೆಟ್ಟಿ

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಕ್ರೀಡೆ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ದೇಶದ ಭವಿಷ್ಯದ ಚೆಸ್ ತಾರೆಗಳನ್ನು ಪರಿಚಯಿಸುವ ಪ್ರತಿಷ್ಠಿತ 39ನೇ ರಾಷ್ಟ್ರೀಯ ಅಂಡರ್-11 ಓಪನ್ ಮತ್ತು ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ ಷಿಪ್-2026 ಅ.2 ರಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ. ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ಡಿಕೆಸಿಎ), ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ (ಕೆಎಸ್‌ಸಿಎ) ಆಶ್ರಯದಲ್ಲಿ, ನವಮಂಗಳೂರು ಬಂದರು ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ನಡೆವ ಈ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ ಷಿಪ್ ಅಗಸ್ಟ್‌ 8 ರವರೆಗೆ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಡಿಕೆಸಿಎ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

<

ಚಾಂಪಿಯನ್‌ ಷಿಪ್‌ನ ಉದ್ಘಾಟನಾ ಸಮಾರಂಭವು ಭಾನುವಾರ ಬೆಳಗ್ಗೆ 11.15 ಕ್ಕೆ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸರ್ಕಾರದ ಪ್ರತಿನಿಧಿಗಳು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳು, ಪ್ರಾಯೋಜಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಚೆಸ್ ಕ್ಷೇತ್ರದ ಗಣ್ಯರು ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 641 ಪ್ರತಿಭಾವಂತ ಬಾಲಕ ಮತ್ತು ಬಾಲಕಿಯರು ಈ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದು, ಭಾರತದ ಉದಯೋನ್ಮುಖ ಚೆಸ್ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಇದು ಮಹತ್ವದ ವೇದಿಕೆಯಾಗಲಿದೆ. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮುಂದಿನ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೂ ದಾರಿ ತೆರೆದುಕೊಳ್ಳುವ ನಿರೀಕ್ಷೆಯಿದೆ ಎಂದರು.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಸಹಕಾರದೊಂದಿಗೆ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್, ರಾಷ್ಟ್ರಮಟ್ಟದ ಕ್ರೀಡಾಕೂಟಗಳ ಯಶಸ್ವಿ ಆತಿಥ್ಯ ನೀಡುವ ರಾಜ್ಯವಾಗಿ ಕರ್ನಾಟಕದ ಹೆಗ್ಗಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಪಂದ್ಯಾವಳಿಯ ಯಶಸ್ವಿ ಆಯೋಜನೆಗಾಗಿ ಉನ್ನತ ಮಟ್ಟದ ಆಟದ ವ್ಯವಸ್ಥೆ, ಸ್ಪರ್ಧಾಳುಗಳಿಗೆ ಗುಣಮಟ್ಟದ ವಸತಿ, ವೈದ್ಯಕೀಯ ಸೌಲಭ್ಯ, ತಾಂತ್ರಿಕ ನೆರವು ಹಾಗೂ ಪಂದ್ಯಗಳ ನೇರ ಪ್ರಸಾರದ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.

ಒಂದು ವಾರದ ಕಾಲ ನಡೆಯಲಿರುವ ಈ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ದೇಶದ ವಿವಿಧ ಭಾಗಗಳಿಂದ ಆಟಗಾರರು, ತರಬೇತುದಾರರು, ಪೋಷಕರು ಹಾಗೂ ಚೆಸ್ ಅಭಿಮಾನಿಗಳು ಆಗಮಿಸಲಿದ್ದು, ಮಂಗಳೂರು ಮತ್ತೊಮ್ಮೆ ರಾಷ್ಟ್ರಮಟ್ಟದ ಕ್ರೀಡಾ ಚಟುವಟಿಕೆಯ ಕೇಂದ್ರಬಿಂದುವಾಗಲಿದೆ ಎಂದು ತಿಳಿಸಿದ್ದಾರೆ.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *