ಕಾರವಾರ: ವಿಶೇಷ ಸಮಗ್ರ ಪರಿಷ್ಕರಣೆ–2026ರ (ಎಸ್‌ಐಆರ್) ಬಳಿಕ ಉತ್ತರ ಕನ್ನಡ ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ 11,23,022 ಮತದಾರರು ಸ್ಥಾನ ಪಡೆದಿದ್ದಾರೆ. ಮತಗಟ್ಟೆಗಳ ಪುನರ್‌ವಿಂಗಡಣೆ ಬಳಿಕ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1,523 ಮತಗಟ್ಟೆಗಳು ಇರಲಿದ್ದು, ಹಿಂದಿನ ಸಂಖ್ಯೆಗಿಂತ 78 ಮತಗಟ್ಟೆಗಳು ಹೆಚ್ಚಾಗಿವೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಿಯಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ ನಾಲ್ವರು ತೃತೀಯ ಲಿಂಗಿ ಮತದಾರರು ಇದ್ದಾರೆ. ಹಳಿಯಾಳ ಕ್ಷೇತ್ರದಲ್ಲಿ 1,67,767, ಕಾರವಾರದಲ್ಲಿ 1,98,962, ಕುಮಟಾದಲ್ಲಿ 1,77,434, ಭಟ್ಕಳದಲ್ಲಿ 2,13,682, ಶಿರಸಿಯಲ್ಲಿ 1,91,751 ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ 1,73,426 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ. ಮತಗಟ್ಟೆಗಳ ಪೈಕಿ ಹಳಿಯಾಳದಲ್ಲಿ 234, ಕಾರವಾರದಲ್ಲಿ 265, ಕುಮಟಾದಲ್ಲಿ 227, ಭಟ್ಕಳದಲ್ಲಿ 273, ಶಿರಸಿಯಲ್ಲಿ 278 ಹಾಗೂ ಯಲ್ಲಾಪುರದಲ್ಲಿ 246 ಮತಗಟ್ಟೆಗಳು ಇರಲಿವೆ ಎಂದು ತಿಳಿಸಿದ್ದಾರೆ.
ಸೆ.23 ರವರೆಗೆ ಹಕ್ಕು–ಆಕ್ಷೇಪಣೆ
ಕರಡು ಮತದಾರರ ಪಟ್ಟಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಆ.24ರಿಂದ ಸೆ.23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಸ್ವೀಕರಿಸಲಾದ ಹಕ್ಕು–ಆಕ್ಷೇಪಣೆಗಳ ವಿಲೇವಾರಿ ಆ.24ರಿಂದ ಅ.22ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಅ.27ರಂದು ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ಮ್ಯಾಪಿಂಗ್ ಆಗದಿರುವ, ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಹಾಗೂ ಅಗತ್ಯವಿರುವ ಇತರ ಪ್ರಕರಣಗಳ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಬಿಎಲ್‌ಒಗಳ ಮೂಲಕ ನೋಟಿಸ್‌ಗಳನ್ನು ಸಂಬಂಧಪಟ್ಟ ಮತದಾರರಿಗೆ ತಲುಪಿಸಲಾಗುತ್ತದೆ. ನೋಟಿಸ್ ಪಡೆದವರು ನಿಗದಿತ ದಿನಾಂಕ ಮತ್ತು ಸ್ಥಳದಲ್ಲಿ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ವಿಚಾರಣೆಗೆ ಹಾಜರಾಗದವರಿಗೆ ಮತ್ತೊಂದು ದಿನಾಂಕ ನೀಡಲಾಗುತ್ತದೆ. ಗರಿಷ್ಠ ಎರಡು ವಿಚಾರಣಾ ದಿನಾಂಕಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಹೊಸ ಮತದಾರರಿಗೂ ಅವಕಾಶ
ಸೆ.23ರವರೆಗೆ ನಡೆಯುವ ಹಕ್ಕು–ಆಕ್ಷೇಪಣೆ ಅವಧಿಯಲ್ಲಿ, ಅ.1, 2026ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರಿಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. ನಮೂನೆ–6ರೊಂದಿಗೆ ನಿಗದಿತ ದಾಖಲೆ ಹಾಗೂ ಡಿಕ್ಲರೇಷನ್ ಫಾರಂ ಸಲ್ಲಿಸುವುದು ಕಡ್ಡಾಯ. ಹೆಸರು ತೆಗೆದುಹಾಕಲು ನಮೂನೆ–7 ಹಾಗೂ ಹೆಸರು ಮತ್ತು ಇತರ ವಿವರಗಳ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಬಹುದು. ವಿಧಾನಸಭಾ ಕ್ಷೇತ್ರದೊಳಗೆ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಅಥವಾ ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹೆಸರು ವರ್ಗಾಯಿಸಿಕೊಳ್ಳಲು ಕೂಡ ಅವಕಾಶವಿದೆ ಎಂದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಅಧಿಕೃತ ಜಾಲತಾಣಗಳಲ್ಲಿ ಪಡೆಯಬಹುದು. ಸಾರ್ವಜನಿಕರು ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ಜಿಲ್ಲಾ ಮತದಾರರ ಸಹಾಯವಾಣಿ 1950 ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





