ಮಂಗಳೂರು: ಮೆಸ್ಕಾಂನಲ್ಲಿ ಖಾಲಿ ಇರುವ ಪವರ್ಮೇನ್ ಹುದ್ದೆಗಳ ಪೈಕಿ 430 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಪೈಕಿ 395 ಮಂದಿಯನ್ನು ನೇಮಕ ಮಾಡಲಾಗಿದೆ. ಈಗಾಗಲೇ ಅವರಿಗೆ ನೇಮಕಾತಿ ಪತ್ರ ನೀಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೆಸ್ಕಾಂನಲ್ಲಿ ಇನ್ನೂ ಪವರ್ಮೇನ್ ಹುದ್ದೆಗಳು ಖಾಲಿ ಇದ್ದು, ಮುಂದಿನ ಹಂತದಲ್ಲಿ 165 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇತ್ತೀಚೆಗೆ ನೇಮಕಗೊಂಡ ಹೊಸ ಪವರ್ಮೇನ್ಗಳ ಪೈಕಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು ಕೇವಲ ಐದು ಮಂದಿ ಇದ್ದಾರೆ. ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳವರ ಸಂಖ್ಯೆ ಸುಮಾರು 50 ಇದೆ ಎಂದರು.
ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಪವರ್ಮೇನ್ಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ 705 ನಾನ್-ಕಾಂಟ್ಯಾಕ್ಟ್ ವೋಲ್ಟೇಜ್ ಡಿಟೆಕ್ಟರ್ಗಳನ್ನು ವಿತರಿಸಲಾಗಿದೆ. ವಿದ್ಯುತ್ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿದ್ಯುತ್ ಸೋರಿಕೆ ಇಳಿಕೆ
ಮೆಸ್ಕಾಂ ಇದೀಗ ಲಾಭದತ್ತ ಸಾಗುತ್ತಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸೋರಿಕೆಯ ಪ್ರಮಾಣ ಶೇ 12ರಿಂದ ಶೇ 8ಕ್ಕೆ ಇಳಿಕೆಯಾಗಿದೆ. ಗ್ರಾಮ ಪಂಚಾಯಿತಿಗಳು, ಪುರಸಭೆಗಳು ಹಾಗೂ ಪಟ್ಟಣ ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನೀರು ಪೂರೈಕೆ ಮತ್ತು ಬೀದಿ ದೀಪಗಳಿಗೆ ಸಂಬಂಧಿಸಿದ ವಿದ್ಯುತ್ ಬಿಲ್ಗಳ ₹ 305 ಕೋಟಿ ಮೆಸ್ಕಾಂಗೆ ಬಾಕಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ದೀಪಕ್ ಇದ್ದರು.
What do you feel about this post?
Like
Love
Happy
Haha
Sad





