ಬೆಳಗಾವಿ: ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ದಾಳಿ, ಮನೆಗಳಲ್ಲಿ ತಪಾಸಣೆ

ಅಂತರ ಜಿಲ್ಲೆ ಮಹಾನಗರ ರಾಜ್ಯ

Spread the love

ಬೆಳಗಾವಿ: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಉತ್ತರ ವಲಯ ಪೊಲೀಸರು ಭಾನುವಾರ ಮುಂಜಾನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐದು ಜಿಲ್ಲೆಗಳ 1,041 ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲಿಸಿ, ಅವರ ಇತ್ತೀಚಿನ ಚಟುವಟಿಕೆಗಳು ಹಾಗೂ ಸಂಪರ್ಕಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾವಾರು ಕಾರ್ಯಾಚರಣೆಯಲ್ಲಿ ಬೆಳಗಾವಿಯಲ್ಲಿ 201, ವಿಜಯಪುರದಲ್ಲಿ 482, ಬಾಗಲಕೋಟೆಯಲ್ಲಿ 117, ಧಾರವಾಡದಲ್ಲಿ 46 ಹಾಗೂ ಗದಗದಲ್ಲಿ 195 ರೌಡಿಶೀಟರ್‌ಗಳ ಮನೆಗಳನ್ನು ತಪಾಸಣೆ ನಡೆಸಲಾಗಿದೆ.

ಕಾರ್ಯಾಚರಣೆ ವೇಳೆ ಸಮರ್ಪಕ ದಾಖಲೆಗಳಿಲ್ಲದ 27 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ರೌಡಿಶೀಟರ್‌ಗಳಿಗೆ ಸಂಬಂಧಿಸಿದ 9 ಮಾರಕಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದೆ.

ಅಪರಾಧ ಹಿನ್ನೆಲೆಯುಳ್ಳವರ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *