ಎಂಆರ್‌ಪಿಎಲ್ ಸ್ಫೋಟ, ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಿ: ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು

Spread the love

ಮಂಗಳೂರು: ಎಂಆರ್‌ಪಿಎಲ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಬುಧವಾರ ಸ್ಥಾವರಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಸ್ಫೋಟದ ನಿಖರ ಕಾರಣ ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸುವುದರ ಜತೆಗೆ ಮೃತ ಕಾರ್ಮಿಕರ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಗರಿಷ್ಠ ಪರಿಹಾರ ನೀಡಬೇಕು ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

ಎಂಆರ್‌ಪಿಎಲ್ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟ ಸುರತ್ಕಲ್ ಮಾತ್ರವಲ್ಲದೆ ಇಡೀ ಮಂಗಳೂರು ನಗರದ ಜನರನ್ನು ಬೆಚ್ಚಿಬೀಳಿಸಿದೆ. ಭೂಕಂಪನದ ಅನುಭವವಾಗುವಷ್ಟು ತೀವ್ರತೆಯ ಸ್ಫೋಟ ಸಂಭವಿಸಿರುವುದು ಗಂಭೀರ ಎಚ್ಚರಿಕೆಯ ಸಂದೇಶವಾಗಿದೆ ಎಂದು ಅವರು ಹೇಳಿದರು.

ಆರಂಭಿಕ ಮಾಹಿತಿಯಂತೆ 9 ಕಾರ್ಮಿಕರು ಗಾಯಗೊಂಡಿರುವುದು ತಿಳಿದುಬಂದಿತ್ತು. ಆದರೆ ಅಗ್ನಿಶಾಮಕ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದ ಸಂದರ್ಭದಲ್ಲಿ ಸ್ಥಾವರದ ಸಮೀಪ ಕರ್ತವ್ಯದಲ್ಲಿದ್ದ ನೌಕರ ಮೃತಪಟ್ಟಿರುವುದು ತಡವಾಗಿ ತಿಳಿದುಬಂದಿದ್ದು, ಇದು ಆಘಾತಕಾರಿ ಸಂಗತಿಯಾಗಿದೆ ಎಂದು ಶಾಸಕರು ಹೇಳಿದರು.

ಸಮಗ್ರ ತನಿಖೆಗೆ ಒತ್ತಾಯ

ಇಂತಹ ದುರ್ಘಟನೆಗಳು ಮುಂದೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸಬೇಕು. ತನಿಖೆಯ ಬಳಿಕ ಸುರಕ್ಷತಾ ಲೋಪಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಿ, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಾ. ಭರತ್ ಶೆಟ್ಟಿ ಒತ್ತಾಯಿಸಿದರು.

ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು. ಗಾಯಗೊಂಡಿರುವ ಕಾರ್ಮಿಕರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಬೇಕು. ಗಾಯಾಳುಗಳಿಗೆ ಸೂಕ್ತ ಪರಿಹಾರವನ್ನೂ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಮಿಕರ ಸುರಕ್ಷತೆಗೆ ಆದ್ಯತೆ

ಅಪಾಯಕಾರಿ ಸ್ವರೂಪದ ಕೆಲಸ ನಡೆಯುವ ಇಂತಹ ಕೈಗಾರಿಕಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ತಕ್ಷಣ ಆರೋಗ್ಯ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಜಾರಿಗೆ ತರಬೇಕು. ಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಲಕರಣೆಗಳು ಹಾಗೂ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆಯೇ ಎಂಬುದನ್ನು ಸಂಸ್ಥೆಯು ಖಚಿತಪಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮನೆಗಳು ಅಥವಾ ಕಟ್ಟಡಗಳಿಗೆ ಹಾನಿಯಾಗಿದ್ದರೆ, ಅದರ ಸಮಗ್ರ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಅವರು ತಿಳಿಸಿದರು.

ಬಳಿಕ ಶಾಸಕ ಡಾ. ಭರತ್ ಶೆಟ್ಟಿ ಅವರು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಮೃತ ನೌಕರರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *