ದ.ಕ ಎಂಬ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ಮನವಿ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಜಿಲ್ಲೆಯ ಐತಿಹಾಸಿಕ ಹೆಸರಾಗಿರುವ ‘ದಕ್ಷಿಣ ಕನ್ನಡ’ವನ್ನು ಬದಲಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ ಕೈಬಿಟ್ಟು, ‘ದಕ್ಷಿಣ ಕನ್ನಡ’ ಹೆಸರನ್ನೇ ಮುಂದುವರೆಸಬೇಕು ಎಂದು ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿಲಿಯಮ್ ಪಾಯ್ಸ್ ಅವರು ತಿಳಿಸಿದರು.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ.‘ದಕ್ಷಿಣ ಕನ್ನಡ’ ಹೆಸರಿನ ಬದಲಾವಣೆಯ ಬೇಡಿಕೆ ಮಂಗಳೂರಿನ ವಿರುದ್ಧವಾದುದಲ್ಲ. ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ತನ್ನದೇ ಆದ ವಿಶಿಷ್ಟ ಮಹತ್ವ ಹೊಂದಿದೆ. ಆದರೆ ‘ದಕ್ಷಿಣ ಕನ್ನಡ’ ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು.

ಜಿಲ್ಲೆಗೆ 150 ವರ್ಷಕ್ಕೂ ಹೆಚ್ಚಿನ ಆಡಳಿತಾತ್ಮಕ ಇತಿಹಾಸವಿದೆ. ಹಿಂದೆ ‘ಸೌತ್ ಕೆನರಾ’ ಅಥವಾ ‘ಸೌತ್ ಕನಾರಾ’ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶಕ್ಕೆ 1977ರ ಜನವರಿಯಲ್ಲಿ ಕರ್ನಾಟಕ ಸರ್ಕಾರ ‘ದಕ್ಷಿಣ ಕನ್ನಡ’ ಎಂದು ಮರುನಾಮಕರಣ ಮಾಡಿತ್ತು. ಹೀಗಾಗಿ ಈ ಹೆಸರು ಹಲವು ದಶಕಗಳ ಐತಿಹಾಸಿಕ ನಿರಂತರತೆ ಹೊಂದಿದೆ ಎಂದರು.

ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಹಲವು ತಾಲೂಕುಗಳು, ಪಟ್ಟಣಗಳು ಹಾಗೂ ಐತಿಹಾಸಿಕ ಪ್ರದೇಶಗಳು ಜಿಲ್ಲೆಯ ಭಾಗವಾಗಿವೆ. 1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗವನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆ ರಚಿಸಿದ ಬಳಿಕವೂ ಉಳಿದ ಜಿಲ್ಲೆಗೆ ‘ದಕ್ಷಿಣ ಕನ್ನಡ’ ಹೆಸರನ್ನೇ ಮುಂದುವರಿಸಲಾಗಿತ್ತು ಎಂದು ತಿಳಿಸಿದರು.

ಹೆಸರು ಬದಲಾವಣೆಯಿಂದ ಐತಿಹಾಸಿಕ ದಾಖಲೆಗಳು, ಪುಸ್ತಕಗಳು, ನಕ್ಷೆಗಳು, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದಾಖಲೆಗಳು, ಕಾನೂನು ಮತ್ತು ಸಾಂಸ್ಕೃತಿಕ ಉಲ್ಲೇಖಗಳಲ್ಲಿ ವ್ಯಾಪಕ ಬದಲಾವಣೆ ಮಾಡಬೇಕಾಗಬಹುದು. ಆದ್ದರಿಂದ ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಯನ್ನು ಮಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಜಿಲ್ಲೆಯ ಎಲ್ಲ ತಾಲೂಕುಗಳು, ಪಟ್ಟಣಗಳು ಮತ್ತು ಗ್ರಾಮಗಳ ಜನರ ಅಭಿಪ್ರಾಯವನ್ನೂ ಒಳಗೊಂಡಂತೆ ಪಾರದರ್ಶಕವಾಗಿ ನಡೆಸಬೇಕು. ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದರು.

ಬೆನೆಟ್ ಅಮ್ಮಣ್ಣ, ಪ್ರೊ.ಕೃಷ್ಣಮೂರ್ತಿ,ಸ್ಟೀಫನ್ ಪಾಯ್ಸ್ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *