ನಾಸ್ಕಾಮ್ ತಂತ್ರಜ್ಞಾನ ಸಮಾವೇಶ: ಅಗ್ರ ಐದು ಆವಿಷ್ಕಾರಗಳಲ್ಲಿ ಸ್ಥಾನ ಪಡೆದ ‘ಅಕ್ವಾಸಿಂಕ್ ಎಐ’: ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಮಂಗಳೂರಿನ ಅಲೋಶಿಯಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಬೆಂಗಳೂರು: ಮೀನು ಸಾಕಣೆಯಲ್ಲಿ ನೀರಿನ ಗುಣಮಟ್ಟದ ನಿರ್ವಹಣೆ ಹಾಗೂ ಮೀನುಗಳ ಸುರಕ್ಷತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವ ನವೀನ ವೇದಿಕೆಯನ್ನು ಅಭಿವೃದ್ಧಿಪಡಿಸಿರುವ ಮಂಗಳೂರಿನ ಸಂತ ಅಲೋಶಿಯಸ್ (ಡೀಮ್ಡ್ ವಿವಿ) ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳು ರೂಪಿಸಿರುವ ‘ಅಕ್ವಾಸಿಂಕ್ ಎಐ’ ತಂತ್ರಜ್ಞಾನವು ಬೆಂಗಳೂರಿನಲ್ಲಿ ಅ.9ರಂದು ನಡೆದ ನಾಸ್ಕಾಮ್ ತಂತ್ರಜ್ಞಾನ ಸಮಾವೇಶ (ಎನ್‌ಟಿಸಿ) 2026ರ ವಿದ್ಯಾರ್ಥಿ ಆವಿಷ್ಕಾರ ಪ್ರದರ್ಶನದಲ್ಲಿ ಅಗ್ರ ಐದು ಆವಿಷ್ಕಾರಗಳಲ್ಲಿ ಸ್ಥಾನ ಪಡೆದಿದೆ. ಕರ್ನಾಟಕದಾದ್ಯಂತ ಆಯ್ಕೆಯಾಗಿದ್ದ 80 ತಂಡಗಳ ಪೈಕಿ ಈ ತಂಡ ಗಮನಾರ್ಹ ಸಾಧನೆ ಮಾಡಿದೆ.

ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ನ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಹರ್ಷರಾಜ್ ಶೆಟ್ಟಿ ಬಿ., ಶರಣ್ಯ ಶೆಟ್ಟಿ ಮತ್ತು ತ್ರಿಷಾ ಎಚ್. ಈ ಸಾಧನೆ ಮಾಡಿದ ತಂಡದ ಸದಸ್ಯರು.

ಮೀನುಗಳ ಸಾವಿನ ಅಪಾಯ ತಗ್ಗಿಸುವ ತಂತ್ರಜ್ಞಾನ

‘ಅಕ್ವಾಸಿಂಕ್ ಎಐ’ ಕೃತಕ ಬುದ್ಧಿಮತ್ತೆ, ನಿರಂತರ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಗಳನ್ನು ಸಂಯೋಜಿಸಿರುವ ತಂತ್ರಜ್ಞಾನವಾಗಿದೆ. ಮೀನು ಸಾಕಣೆ ಕೊಳಗಳಲ್ಲಿನ ನೀರಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವ ಈ ವ್ಯವಸ್ಥೆ, ಅಪಾಯಕಾರಿಯಾದ ಬದಲಾವಣೆಗಳು ಗಂಭೀರ ಸ್ವರೂಪ ಪಡೆಯುವ ಮೊದಲೇ ಅವುಗಳನ್ನು ಮುನ್ಸೂಚಿಸುವ ಸಾಮರ್ಥ್ಯ ಹೊಂದಿದೆ.

ಜತೆಗೆ, ಮೀನುಗಳಿಗೆ ಅಗತ್ಯವಾದ ಆಮ್ಲಜನಕ ಪೂರೈಸುವ ವ್ಯವಸ್ಥೆ ಹಾಗೂ ನೀರಿನ ಪಂಪ್‌ಗಳನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತದೆ. ಇದರಿಂದ ನೀರಿನ ಗುಣಮಟ್ಟದಲ್ಲಿನ ವ್ಯತ್ಯಾಸಗಳಿಂದ ಉಂಟಾಗಬಹುದಾದ ಮೀನುಗಳ ಸಾಮೂಹಿಕ ಸಾವಿನ ಅಪಾಯವನ್ನು ತಗ್ಗಿಸುವುದು ಮತ್ತು ಮೀನು ಸಾಕಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಈ ತಂತ್ರಜ್ಞಾನದ ಉದ್ದೇಶವಾಗಿದೆ.

ಸರ್ಕಾರದ ನೆರವು ಪಡೆಯಲು ಸಲಹೆ

ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿದ್ಯಾರ್ಥಿಗಳ ಮಳಿಗೆಗೆ ಭೇಟಿ ನೀಡಿ, ಯೋಜನೆ ಕುರಿತು ಮಾಹಿತಿ ಪಡೆದ್ಇದ್ದು, ‘ಅಕ್ವಾಸಿಂಕ್ ಎಐ’ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ನೆರವು ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ತಂತ್ರಜ್ಞಾನ ಕ್ಷೇತ್ರದ ಪರಿಣತರು, ನವೋದ್ಯಮಗಳ ಸ್ಥಾಪಕರು ಹಾಗೂ ಹಿರಿಯ ಉದ್ಯಮ ಪ್ರತಿನಿಧಿಗಳು ಯೋಜನೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ಅವರೊಂದಿಗಿನ ಸಂವಾದವು ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳು, ಉತ್ಪನ್ನದ ರೂಪುರೇಷೆ ಮತ್ತು ಮೀನು ಸಾಕಣೆದಾರರಿಗೆ ಇನ್ನಷ್ಟು ಉಪಯುಕ್ತವಾಗುವಂತೆ ವೇದಿಕೆಯನ್ನು ಅಭಿವೃದ್ಧಿಪಡಿಸುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿತು. ಈ ಸಲಹೆಗಳನ್ನು ಮುಂದಿನ ಹಂತದ ಅಭಿವೃದ್ಧಿಯಲ್ಲಿ ಅಳವಡಿಸಿಕೊಳ್ಳಲು ತಂಡ ಚಿಂತನೆ ನಡೆಸುತ್ತಿದೆ.

ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ

ವಿದ್ಯಾರ್ಥಿಗಳ ಸಾಧನೆಯನ್ನು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಅಭಿನಂದಿಸಿ ಮಾತನಾಡಿ, ‘ಅಕ್ವಾಸಿಂಕ್ ಎಐ’ಅನ್ನು ಪರಿಣಾಮಕಾರಿ ಉತ್ಪನ್ನವಾಗಿ ರೂಪಿಸುವುದರ ಜತೆಗೆ ನವೋದ್ಯಮವಾಗಿ ಬೆಳೆಸುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ವಿವಿ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು.

ಸಮಾವೇಶದ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಪರಿಣತರಿಂದ ಮಾರ್ಗದರ್ಶನ ದೊರೆತಿದ್ದು, ಹಲವು ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ನಾಸ್ಕಾಮ್ ತಂಡವು ಯುವ ಆವಿಷ್ಕಾರಿಗಳಿಗೆ ಲಭ್ಯವಿರುವ ಹೊಸ ಉಪಕ್ರಮಗಳು ಮತ್ತು ನೆರವಿನ ಅವಕಾಶಗಳ ಕುರಿತು ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಿತು ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಡೀನ್ ಡಾ. ಗ್ಲೆನ್ಸನ್ ಟೋನಿ ಹಾಗೂ ಡೀನ್ ಡಾ. ಎಸ್. ರುಬನ್ ಅವರು ಮಾರ್ಗದರ್ಶನ ನೀಡಿದ್ದಾರೆ.

ಪ್ರಾಯೋಗಿಕ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸುವ ವಿದ್ಯಾರ್ಥಿಗಳ ಪ್ರಯತ್ನಕ್ಕೆ ದೊರೆತಿರುವ ಈ ಮನ್ನಣೆ, ನವೀನ ಚಿಂತನೆ, ಉದ್ಯಮಶೀಲತೆ ಮತ್ತು ಕೈಗಾರಿಕಾ ಕ್ಷೇತ್ರದೊಂದಿಗಿನ ಸಹಭಾಗಿತ್ವಕ್ಕೆ ವಿಶ್ವವಿದ್ಯಾಲಯ ನೀಡುತ್ತಿರುವ ಪ್ರೋತ್ಸಾಹವನ್ನೂ ಪ್ರತಿಬಿಂಬಿಸಿದೆ.

Leave a Reply

Your email address will not be published. Required fields are marked *