ಸಹಕಾರಿ ದಿಗ್ಗಜ ಡಾ. ರಾಜೇಂದ್ರ ಕುಮಾರ್ ಆರೋಗ್ಯಕ್ಕಾಗಿ ಪ್ರಾರ್ಥನೆ, ಹರಸಿದ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಸಹಕಾರ ಕ್ಷೇತ್ರದ ಮೂಲಕ ಸಮಾಜದ ವಿವಿಧ ವರ್ಗಗಳ ಜನರೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯ ಚೇತರಿಕೆಗೆ ಹಾರೈಸಿ, ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಅಶಕ್ತರಿಗೆ ನೆರವು ನೀಡುವುದರ ಜತೆಗೆ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಕೊಡುಗೆ ನೀಡುವ ಮೂಲಕ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಗ್ರಹವಾಗುವ ಹೂವುಗಳ ಮರುಬಳಕೆಯ ಯೋಜನೆಗೂ ಬೆಂಬಲ ವ್ಯಕ್ತಪಡಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಪರ್ಯಾಯ ಅಧೋಕ್ಷಜ ಮಠದ ಪೇಜಾವರ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಆಶೀರ್ವಚನ ನೀಡಿದ ಶ್ರೀಗಳು, ನವರಾತ್ರಿ ಉತ್ಸವವು ಪಂಚ ಮಹಾಪರ್ವಗಳಲ್ಲಿ ಪ್ರಮುಖವಾದದ್ದು. ಇಂತಹ ಉತ್ಸವಗಳು ಜನರಲ್ಲಿ ಹರ್ಷ, ಉಲ್ಲಾಸ ಹಾಗೂ ಹೊಸ ಚೈತನ್ಯ ತುಂಬುವುದರ ಜತೆಗೆ ಸಮಾಜದ ಒಗ್ಗಟ್ಟಿಗೂ ನೆರವಾಗುತ್ತವೆ ಎಂದರು.

ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಂತಹ ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆರೋಗ್ಯ, ಆಯಸ್ಸು ಮತ್ತು ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಎಲ್ಲರ ಕರ್ತವ್ಯವಾಗಿದೆ. ಅವರು ಸಮಾಜದೊಂದಿಗೆ ನೂರು ಕಾಲ ಸುಖವಾಗಿ ಬಾಳಲಿ ಎಂದು ಹಾರೈಸಿದರು.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಕಲ ಜೀವಿಗಳ ಹೃದಯದಲ್ಲಿ ನೆಲೆಸಿರುವುದಾಗಿ ತಿಳಿಸಿದ್ದಾನೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ಭಗವಂತನನ್ನು ಕಾಣುತ್ತಾ, ಸಮಾನತೆ ಮತ್ತು ಸಹಕಾರದ ಮನೋಭಾವದಿಂದ ಸೇವೆ ಸಲ್ಲಿಸುವುದು ಮುಖ್ಯ. ಈ ನಿಟ್ಟಿನಲ್ಲಿ ರಾಜೇಂದ್ರ ಕುಮಾರ್ ಅವರು ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಬೆರೆತು ಸೇವೆ ಸಲ್ಲಿಸುತ್ತಿರುವುದು ಮಾದರಿಯಾಗಿದೆ. ದೇವರ ಸೇವೆ ಮತ್ತು ಸಮಾಜಸೇವೆ ಪರಸ್ಪರ ಪೂರಕವಾಗಿವೆ ಎಂದು ಹೇಳಿದರು.

ಗುಣಮುಖನಾಗಿ ಮರಳಿದ್ದೇನೆ

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ದೇವರ ಆಶೀರ್ವಾದ ಹಾಗೂ ಎಲ್ಲರ ಪ್ರೀತಿ, ಹಾರೈಕೆಯಿಂದ ಗುಣಮುಖನಾಗಿ ಮರಳಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಕೇಂದ್ರಗಳು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೇನೆ. ತಮ್ಮ ಮೇಲಿನ ಪ್ರೀತಿ ಮತ್ತು ವಿಶ್ವಾಸ ನಿರಂತರವಾಗಿರಲಿ ಎಂದು ಆಶಿಸಿದರು.

ದೇವರಿಗೆ ಅರ್ಪಿಸಿದ ಹೂವುಗಳ ಮರುಬಳಕೆ

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ದೇವಸ್ಥಾನಗಳಲ್ಲಿ ದೇವರಿಗೆ ಅರ್ಪಿಸುವ ಹೂವುಗಳನ್ನು ಕಸವೆಂದು ಪರಿಗಣಿಸದೆ, ಅವುಗಳ ಪಾವಿತ್ರ್ಯವನ್ನು ಗೌರವಿಸಿ ಮರುಬಳಕೆ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಮುಜರಾಯಿ ಹಾಗೂ ಮುಜರಾಯಿಯೇತರ ದೇವಸ್ಥಾನಗಳು ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳಿವೆ. ಭಕ್ತರು ಭಕ್ತಿಯಿಂದ ದೇವರಿಗೆ ಅರ್ಪಿಸುವ ಹೂವುಗಳನ್ನು ದೇವರ ಮುಡಿ, ಪಾದ ಹಾಗೂ ಮೈಮೇಲೆ ಸಮರ್ಪಿಸಲಾಗುತ್ತದೆ. ಇಂತಹ ಹೂವುಗಳನ್ನು ಬಳಿಕ ಕಸಕ್ಕೆ ಎಸೆಯುವ ಬದಲು, ಅವುಗಳಿಂದ ಅಗರಬತ್ತಿ, ಧೂಪ ಮತ್ತು ಕೊಠಡಿ ಸುಗಂಧ ದ್ರವ್ಯಗಳಂತಹ ಉತ್ಪನ್ನಗಳನ್ನು ತಯಾರಿಸಬಹುದು ಎಂದು ತಿಳಿಸಿದರು.

ಈ ಯೋಜನೆಯಿಂದ ಹೂವುಗಳ ಮರುಬಳಕೆಗೆ ಅವಕಾಶ ಕಲ್ಪಿಸುವುದರ ಜತೆಗೆ ಪರಿಸರ ಸಂರಕ್ಷಣೆಗೂ ನೆರವಾಗಲಿದೆ. ದೇವಸ್ಥಾನಗಳಿಂದ ಹೂವುಗಳನ್ನು ಗೌರವಯುತವಾಗಿ ಸಂಗ್ರಹಿಸಿ, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಸ್‌ಸಿಡಿಸಿಸಿ ಬ್ಯಾಂಕ್ ನೀಡಿರುವ ವಾಹನವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಸಮಾಜದ ಎಲ್ಲ ವರ್ಗಗಳೊಂದಿಗೂ ಆತ್ಮೀಯತೆ

ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಅವರು, ಎಲ್ಲರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ ಎಂದರು.

ಅವರ ಸುಖದಲ್ಲಿ ಸಂತೋಷಪಡುವುದು ಹಾಗೂ ಕಷ್ಟದ ಸಂದರ್ಭದಲ್ಲಿ ಜೊತೆಯಾಗಿ ನಿಲ್ಲುವುದು ಎಲ್ಲರ ಕರ್ತವ್ಯವಾಗಿದೆ. ಅವರು ಉತ್ತಮ ಆರೋಗ್ಯದೊಂದಿಗೆ ನೂರು ಕಾಲ ಬಾಳಲಿ ಮತ್ತು ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ ಎಂದು ಹಾರೈಸಿದರು.

ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಭಾಸ್ಕರ್ ಎಸ್.ಕೋಟ್ಯಾನ್ , ಶಶಿಕುಮಾ‌ರ್ ರೈ ಬಾಲ್ಯೊಟ್ಟು, ಅಶೋಕ್ ಕುಮಾರ್ ಶೆಟ್ಟಿ, ಜೈರಾಜ್ ಬಿ.ರೈ, ಎಸ್. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು ,ಎಂ. ಮಹೇಶ್ ಹೆಗ್ಡೆ ,ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಎಸ್.ಎನ್. ಮನ್ಮಥ , ಕುಶಾಲಪ್ಪ ಗೌಡ, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ., ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮೇಘರಾಜ್ ಜೈನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ , ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ಸೇರಿದಂತೆ ಹಲವರು ಇದ್ದರು.

ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು, ಶಶಿಕುಮಾರ್ ರೈ ಬಾಲ್ಯೋಟ್ಟು ವಂದಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *