ಕೊಲ್ಲೂರಿನಲ್ಲಿ ಮೂಕಾಂಬಿಕೆಯ ಪುಷ್ಪ ರಥೋತ್ಸವ ವೈಭವ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಕೊಲ್ಲೂರು: ಹೂವಿನಿಂದ ಅಲಂಕೃತಗೊಂಡ ರಥದಲ್ಲಿ ವಿರಾಜಮಾನಳಾದ ಶ್ರೀ ಮೂಕಾಂಬಿಕೆಯ ದರ್ಶನ, ಮೊಳಗಿದ ದೇವಿಯ ಜಯಘೋಷ, ಭಕ್ತಿಭಾವದಿಂದ ರಥ ಎಳೆದ ಭಕ್ತಸಮೂಹ… ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಶ್ರೀ ದೇವಿಯ ಪುಷ್ಪ ರಥೋತ್ಸವ ಭಕ್ತಿಯ ವೈಭವಕ್ಕೆ ಸಾಕ್ಷಿಯಾಯಿತು. ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ರಥೋತ್ಸವ ನೆರವೇರಿತು. ದೇವಿಯ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು.

ಧಾರ್ಮಿಕ ವಿಧಿಗಳೊಂದಿಗೆ ರಥೋತ್ಸವ

ನವರಾತ್ರಿ ಆರಂಭದಿಂದ ಮಹಾನವಮಿಯವರೆಗೆ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಮಂಗಳವಾರ ತಂತ್ರಿ ರಾಮಚಂದ್ರ ಅಡಿಗ ಮತ್ತು ಋತ್ವಿಜರಾದ ಗೋವಿಂದ ಅಡಿಗ, ಎನ್. ಸುಬ್ರಮಣ್ಯ ಅಡಿಗ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು.

ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದ ಒಳಗಿನಿಂದ ಹೊರತಂದು ಪ್ರದಕ್ಷಿಣೆ ಹಾಗೂ ಬಲಿ ಸೇವೆ ನಡೆಸಲಾಯಿತು. ಪುಷ್ಪಗಳಿಂದ ಅಲಂಕರಿಸಿದ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥಪೂಜೆ ನೆರವೇರಿಸಲಾಯಿತು. ತಂತ್ರಿಗಳು ಪೂಜೆ ಸಲ್ಲಿಸಿ ಮಂಗಳಾರತಿ ಬೆಳಗಿದ ಬಳಿಕ ಭಕ್ತರು ದೇವಿಯ ಜಯಘೋಷ ಮೊಳಗಿಸುತ್ತ ರಥವನ್ನು ಎಳೆದರು. ದೇವಸ್ಥಾನದ ಒಳಪ್ರಾಂಗಣದಲ್ಲಿ ರಥ ಒಂದು ಸುತ್ತು ಸಂಚರಿಸಿತು.

ರಥೋತ್ಸವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜ, ಮಾಜಿ ಸಚಿವ ಆರ್. ಶಂಕರ್, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಂ ಶೆಟ್ಟಿ, ಮೋಹನ್‌ಚಂದ್ರ ನಂಬಿಯಾರ್, ಬಿ. ಕಿಶೋರ್ ಹೆಗ್ಡೆ, ಬೆಂಗಳೂರಿನ ಉದ್ಯಮಿ ವೆಂಕಟೇಶ್, ಹಿರಿಯ ಕಂದಾಯ ಅಧಿಕಾರಿ ಮಹೇಶ್ ದೇವನಹಳ್ಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಸದಸ್ಯರಾದ ಡಾ. ಪಿ.ವಿ. ಅಭಿಲಾಶ್, ಯು. ರಾಜೇಶ್ ಕಾರಂತ್, ರಘುರಾಮ ದೇವಾಡಿಗ ಆಲೂರು, ಸುರೇಂದ್ರ ಶೆಟ್ಟಿ, ಧನಾಕ್ಷೀ ಪೂಜಾರಿ, ಸುಧಾ ಬೈಂದೂರು, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಐ.ಎಚ್. ತುಂಬಿಗೆ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಕೊಲ್ಲೂರು, ಅರ್ಚಕರಾದ ವಿಘ್ನೇಶ್ ಅಡಿಗ, ಸುರೇಶ್ ಭಟ್, ಮೂರ್ತಿ ಕಾಳಿದಾಸ್ ಭಟ್, ಶ್ರೀಶ ಭಟ್, ವಿವೇಕ್ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್

ಸಹಸ್ರಾರು ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಜನಸಂದಣಿ ನಿಯಂತ್ರಣ ಹಾಗೂ ಸುಗಮ ದರ್ಶನಕ್ಕಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕಲ್ಪಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಗೃಹರಕ್ಷಕ ದಳದ ಎರಡನೇ ಕಮಾಂಡ್ ರಾಜೇಶ್ ಕೆ.ಸಿ., ವೃತ್ತ ನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ಶಿವಕುಮಾರ್, ಉಪನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ, ಭೀಮಾಶಂಕರ, ನಿರಂಜನ್ ಗೌಡ, ಮಹೇಶ್ ಪೂಜಾರಿ, ಸುದರ್ಶನ್ ಸೇರಿದಂತೆ ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು.

ವಿಜಯದಶಮಿಗೆ ಅಕ್ಷರಾಭ್ಯಾಸದ ಸಂಭ್ರಮ

ವಿಜಯದಶಮಿ ಅಂಗವಾಗಿ ಬುಧವಾರ ಬೆಳಗಿನ ಜಾವ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ ಆರಂಭವಾಯಿತು. ಋತ್ವಿಜರ ಮಾರ್ಗದರ್ಶನದಲ್ಲಿ ಪುಟಾಣಿಗಳು ಅಕ್ಷರಾಭ್ಯಾಸ ಮಾಡಿದರು. ಇದರೊಂದಿಗೆ ಕದಿರು ಹಬ್ಬ, ನವಾನ್ನಪ್ರಾಶನ ಹಾಗೂ ಸಂಜೆ ವಿಜಯೋತ್ಸವ ಕಾರ್ಯಕ್ರಮಗಳೂ ನಡೆದವು.

ನವರಾತ್ರಿ ಉತ್ಸವದ ಪ್ರತಿದಿನ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಂಸ್ಕೃತಿಕ ತಂಡಗಳು ಪ್ರತಿದಿನ ಸರಸ್ವತಿ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದವು.

Leave a Reply

Your email address will not be published. Required fields are marked *